– ಜಮಖಂಡಿ ತಾಲೂಕಿನಲ್ಲಿ ಮೂರು ನದಿಗಳಿಂದ ಪ್ರವಾಹ ಭೀತಿ
ಬಾಗಲಕೋಟೆ: ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಕೊಂಚ ಬಿಡುವು ನೀಡಿದರೂ, ಪ್ರವಾಹ ಮಾತ್ರ ತಗ್ಗುತ್ತಿಲ್ಲ. ಇದರಿಂದಾಗಿ ನಡುಗಡ್ಡೆ ಜನರು ತೀವ್ರ ಆತಂಕಗೊಂಡಿದ್ದು, ಸ್ಥಳಾಂತರ ಕಾರ್ಯ ಮುಂದುವರಿದಿದೆ.
ಜಮಖಂಡಿ ತಾಲೂಕಿನಲ್ಲಿ ಆತಂಕ ಹೆಚ್ಚಾಗಿದ್ದು, ಮುತ್ತೂರು ನಡುಗಡ್ಡೆ ಜನರಿಗೆ ಕಳೆದ ಪ್ರವಾಹದ ಕಹಿ ನೆನಪು ಕಣ್ಮುಂದೆ ಬರುತ್ತಿದೆ. ಇಲ್ಲಿನ ಜನ ಸದ್ಯ ನಡುಗಡ್ಡೆ ತೊರೆದು ತುಬಚಿ ಗ್ರಾಮಕ್ಕೆ ಸ್ಥಳಾಂತರಗೊಂಡಿದ್ದಾರೆ. ಶೂರ್ಪಾಲಿ, ತುಬಚಿ, ಮುತ್ತೂರು ಕಂಣವಾಡಿ ಗ್ರಾಮಗಳ ಕೆಲ ಪ್ರದೇಶಗಳು ನಡುಗಡ್ಡೆಯಾಗಿವೆ. ಈ ಬಾರಿಯೂ ಪ್ರವಾಹದ ಆತಂಕ ಎದುರಾಗಿರುವ ಹಿನ್ನೆಲೆ ಜನ ಸುರಕ್ಷಿತ ಪ್ರದೇಶಗಳತ್ತ ಧಾವಿಸುತ್ತಿದ್ದಾರೆ.
ಗಂಟು ಮೂಟೆ, ದನಕರು ಕಟ್ಟಿಕೊಂಡು ಪಯಣ ದೋಣಿಯಲ್ಲಿ ಬೇರೆ ಗ್ರಾಮಕ್ಕೆ ಸ್ಥಳಾಂತರಗೊಂಡಿದ್ದಾರೆ. ಪ್ರವಾಹದಿಂದಾಗಿ ತುಬಚಿ, ಶೂರ್ಪಾಲಿಯಿಂದ ಜಂಬಗಿ ಕಡೆ ತೆರಳುವ ಸಂಪರ್ಕ ಕಡಿತವಾಗಿದ್ದು, ಶೂರ್ಪಾಲಿಯ ಪ್ರಸಿದ್ಧ ಲಕ್ಷ್ಮೀ ನರಸಿಂಹನಿಗೂ ಪ್ರವಾಹ ಬಿಸಿ ತಟ್ಟಿದೆ. ಕೃಷ್ಣಾ ನದಿ ದೇವಸ್ಥಾನವನ್ನು ಸುತ್ತವರಿದಿದ್ದು, ಜನ ಪರದಾಡುವಂತಾಗಿದೆ. ಈ ಮೂಲಕ ಜಮಖಂಡಿ ತಾಲೂಕಿನ ಜನರಿಗೆ ಘಟಪ್ರಭಾ, ಮಲಪ್ರಭಾ ಜೊತೆಗೆ ಕೃಷ್ಣಾ ನದಿಯ ಪ್ರವಾಹ ಭೀತಿ ಸಹ ಹೆಚ್ಚಾಗಿದೆ.