– ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಮಗು ದುರ್ಮರಣ
ಲಕ್ನೋ: ಉತ್ತರಪ್ರದೇಶದ ಆಗ್ರಾದಲ್ಲಿ ಇತ್ತೀಚೆಗೆ ನಡೆದ ಘಟನೆಯೊಂದು ದೇಶದಲ್ಲಿ ಆರೋಗ್ಯ ರಕ್ಷಣಾ ವ್ಯವಸ್ಥೆ ಹೇಗಿದೆ ಎಂಬುದನ್ನು ಬಹಿರಂಗಪಡಿಸಿದೆ. ಶಸ್ತ್ರಚಿಕಿತ್ಸೆಗೆ ಬೇಕಾದ ಗ್ಲೌಸ್ ಗಳು ಇಲ್ಲ ಎಂದು ಹೇಳಿ ಸಿಬ್ಬಂದಿ ಗರ್ಭಿಣಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ.
ಉತ್ತರಪ್ರದೇಶ ಆಗ್ರಾದಲ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಗರ್ಭಿಣಿಯನ್ನು ಗುಡ್ಡಿ ದೇವಿ ಹಾಗೂ ಆಕೆಯ ಪತಿ ಅನಿಲ್ ಕುಮಾರ್ ಎಂದು ಗುರುತಿಸಲಾಗಿದೆ. ಇವರು ಈ ಸಮುದಾಯ ಆರೋಗ್ಯ ಕೇಂದ್ರದ ಆಸು-ಪಾಸಿನಲ್ಲಿಯೇ ವಾಸವಾಗಿದ್ದಾರೆ.
Advertisement
Advertisement
ಮೇ 18ರಂದು ರಾತ್ರಿ 9.30ರ ಸುಮಾರಿಗೆ ಗುಡ್ಡಿ ದೇವಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರು ಹತ್ತಿರವೇ ಇರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿದ್ದಾರೆ. ಆದರೆ ಅಲ್ಲಿ ಗುಡ್ಡಿ ದೇವಿಯನ್ನು ಪರೀಕ್ಷಿಸಿದ ಮಹಿಳಾ ಸಿಬ್ಬಂದಿ ಮನೆಗೆ ವಾಪಸ್ ಕರೆದುಕೊಂಡು ಹೋಗುವಂತೆ ಅನಿಲ್ ಕುಮಾರ್ ಗೆ ತಿಳಿಸಿದ್ದಾರೆ. ಅಲ್ಲದೆ ನಾಳೆ ಬನ್ನಿ ಎಂದು ಹೇಳಿದ್ದಾರೆ.
Advertisement
ಇತ್ತ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಪತಿ ಅನಿಲ್, ಆಸ್ಪತ್ರೆಗೆ ದಾಖಲಿಸಿಕೊಳ್ಳುವಂತೆ ಸಿಬ್ಬಂದಿಯಲ್ಲಿ ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಆದರೆ ಅನಿಲ್ ಮಾತನ್ನು ಸಿಬ್ಬಂದಿ ಕೇಳಲು ತಯಾರಿರಲಿಲ್ಲ. ತನ್ನ ಮನವಿಯನ್ನು ಯಾರೂ ಆಲಿಸದಿದ್ದಾಗ ಅನಿಲ್ ಸಹಾಯಕ್ಕಾಗಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಮೊರೆ ಹೋದರು. ಈ ವಿಚಾರ ತಿಳಿದ ಸಿಬ್ಬಂದಿ ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಿಕೊಂಡಿದ್ದಲ್ಲದೇ, ಅನಿಲ್ ಜೊತೆ ಅನುಚಿತವಾಗಿ ವರ್ತಿಸಲು ಆರಂಭಿಸಿದ್ದಾರೆ.
Advertisement
ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಚಿಕಿತ್ಸೆ ನೀಡಲು ಆರಂಭಿಸಿದ ವೈದ್ಯರು ಒಂದು ಜೊತೆ ಗ್ಲೌಸ್ ತರುವಂತೆ ಅನಿಲ್ ಗೆ ಹೇಳಿದ್ದಾರೆ. ಆದರೆ ದುರಾದೃಷ್ಟ ಅಂದರೆ ಲಾಕ್ ಡೌನ್ ಪರಿಣಾಮ 1 ಗಂಟೆ ಕಾಲ ಹುಡುಕಾಡಿದರೂ ಅನಿಲ್‍ಗೆ ಎಲ್ಲಿಯೂ ಗ್ಲೌಸ್ ಸಿಗಲಿಲ್ಲ. ಹೀಗಾಗಿ ವೈದ್ಯರು ಗಿಡ್ಡು ದೇವಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಪರಿಣಾಮ ದಂಪತಿ ನಸುಕಿನ ಜಾವ 3 ಗಂಟೆ ಸುಮಾರಿಗೆ ತಮ್ಮ ಮನೆಗೆ ವಾಪಸ್ಸಾಗಿದ್ದಾರೆ.
ಮರುದಿನ ಗುಡ್ಡಿ ದೇವಿ ಏಕಾಏಕಿ ಪ್ರಜ್ಞಾಹೀನಳಾಗಿ ಬಿದ್ದಳು. ಹೀಗಾಗಿ ಕೂಡಲೇ ಆಕೆಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಆಕೆಯನ್ನು ಪರೀಕ್ಷಿಸಿದ ವೈದ್ಯರು, ಹೊಟ್ಟೆಯಲ್ಲಿಯೇ ಮಗು ಸಾವನ್ನಪ್ಪಿದೆ ಎಂಬ ಆಘಾತಕಾರಿ ಸುದ್ದಿಯನ್ನು ನೀಡಿದರು. ಇದನ್ನು ಕೇಳಿದ ಪತಿ ಅನಿಲ್ ದಂಗಾಗಿ ಹೋದರು.
ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಅನಿಲ್, ಮೊದಲು ಹೋದ ಆಸ್ಪತ್ರೆಯಲ್ಲೇ ಸರಿಯಾದ ಚಿಕಿತ್ಸೆ ಸಿಗುತ್ತಿದ್ದರೆ ನನ್ನ ಮಗು ಬದುಕುಳಿಯುತ್ತಿತ್ತು. ಆದರೆ ಸಿಬ್ಬಂದಿಯಿಂದಾಗಿ ಇಂದು ನನ್ನ ಮಗು ಬದುಕಲಿಲ್ಲ. ಹೀಗಾಗಿ ಅಧಿಕಾರಿಗಳು ಅಕಲ್ಲಿನ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದು ತಿಳಿಸಿದ್ದಾರೆ.
ಘಟನೆಯ ಬಳಿಕ ಪೊಲೀಸ್ ಠಾಣೆಗೆ ದೂರು ನೀಡಿದ ಪರಿಣಾಮ ಎಟ್ಮಾಡ್ಪುರದ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಜ್ಯೋತಿ ರೈ ಸಮುದಾಯ ಆರೋಗ್ಯ ಕೇಂದ್ರಕ್ಕೆ ನೋಟಿಸ್ ಕಳುಹಿಸಿದ್ದಾರೆ.