ಚಿಕ್ಕಮಗಳೂರು:ಗ್ರಾಮ ಪಂಚಾಯತ್ ಚುನಾವಣೆಗೆ ಯಾರಾದರೂ ನಾಮಪತ್ರ ಸಲ್ಲಿಸಿದರೆ ಅವರಿಗೆ ಹಾರ ಹಾಕಿ ಅಂತವರ ಮನೆ ಮುಂದೆ ಧರಣಿ ಕೂರುವುದಾಗಿ ಮಲೆನಾಡಿಗರು ಎಚ್ಚರಿಕೆ ನೀಡಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯ ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಆನ್‌ಲೈನ್ ಸೇರಿದಂತೆ ಯಾವುದೇ ವಿಧದಲ್ಲೂ ಯಾರೂ ಕೂಡ ನಾಮಪತ್ರ ಸಲ್ಲಿಸಬಾರದು ಎಂದು ಖಾಂಡ್ಯ ನಾಗರೀಕ ಹಿತರಕ್ಷಣಾ ವೇದಿಕೆ ಹಾಗೂ ಸರ್ವಜನಿಕರು ಸೂಚಿಸಿದ್ದಾರೆ.
ಶತಮಾನಗಳ ಬದುಕೆ ಬೀದಿಗೆ ಬೀಳುವಾಗ ಚುನಾವಣೆ ಬೇಕೇ ಎಂಬ ಪ್ರಶ್ನೆ ಮಲೆನಾಡಿಗರಲ್ಲಿ ಮೂಡಿದೆ. ಈಗಾಗಲೇ ಮಲೆನಾಡಿಗರ ಬದುಕಿನ ಮೇಲೆ ಹುಲಿ ಯೋಜನೆ, ಬಫರ್ ಝೋನ್, ಕಸ್ತೂರಿ ರಂಗನ್ ವರದಿ ಹಾಗೂ ಪರಿಸರ ಸೂಕ್ಷ್ಮ ವಲಯದ ತೂಗುಗತ್ತಿ ತೂಗುತ್ತಿದೆ. ಸರ್ಕಾರದ ಈ ಯೋಜನೆಗಳಿಂದ ಜಿಲ್ಲೆಯ ಮಲೆನಾಡು ಭಾಗದ ನೂರಾರು ಗ್ರಾಮಗಳೇ ಕಣ್ಮರೆಯಾಗಲಿವೆ. ಈ ಕಾರಣಕ್ಕೆ ಮಲೆನಾಡಿಗರು ಚುನಾವಣಾ ಬಹಿಷ್ಕಾರಕ್ಕೆ ಸಿದ್ಧತೆ ನಡೆಸಿದ್ದಾರೆ.
ಖಾಂಡ್ಯ ಹೋಬಳಿಯ ಕಡವಂತಿ, ಹುಯಿಗೆರೆ, ದೇವದಾನ ಹಾಗೂ ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಈಗಾಗಲೇ ಅಲ್ಲಲ್ಲಿ ಬ್ಯಾನರ್ ಕಟ್ಟಿದ್ದು, ಚುನಾವಣೆಗಿಂತ ಬದುಕು ದೊಡ್ಡದ್ದಾಗಿರುವ ಕಾರಣ ಮಲೆನಾಡಲ್ಲಿ ಚುನಾವಣೆ ಬಹಿಷ್ಕಾರದ ಕೂಗು ಜೋರಾಗಿದೆ.
ಈಗಾಗಲೇ ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತೀ ಭೂತ್ ಗೆ ಒಂದೊಂದು ಬ್ಯಾನರ್ ಕಟ್ಟಲು ಮುಂದಾಗಿದ್ದಾರೆ. ಯಾರೂ ನಾಮಪತ್ರ ಸಲ್ಲಿಸದೇ ಅಧಿಕಾರಿಗಳಿಗೆ ಎಚ್ಚರಿಕೆಯ ಸಂದೇಶ ನೀಡಲು ಮುಂದಾಗಿದ್ದಾರೆ. ಇದು ನಮ್ಮ ಅಳಿವು-ಉಳಿವಿನ ಪ್ರಶ್ನೆ. ಜೀವನವನ್ನ ಬಲಿ ಕೊಡುವ ಬದಲು ಚುನಾವಣೆ ಬಹಿಷ್ಕಾರ ಮಾಡಿ ಸಂದೇಶ ರವಾನಿಸಲು ನಿರ್ಧರಿಸಿದ್ದಾರೆ.
ಐದು ವರ್ಷಗಳ ಅವಧಿಯ ಸದಸತ್ವಕ್ಕೆ ಬದುಕನ್ನ ಬಲಿ ಕೊಡುವ ಬದಲು ಸರ್ಕಾರಕ್ಕೆ ಎಚ್ಚರಿಕೆ ನೀಡೋಣ ಎಂದು ಖಾಂಡ್ಯ ನಾಗರೀಕ ಹಿತರಕ್ಷಣಾ ವೇದಿಕೆ ಮುಂದಾಗಿದೆ. ಆದ್ದರಿಂದ ಎಲ್ಲಾ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದೆ ಮತದಾರರು ಮತದಾನ ಮಾಡದೆ ಚುನಾವಣೆ ಬಹಿಷ್ಕಾರಕ್ಕೆ ಬೆಂಬಲ ನೀಡಬೇಕೆಂದು ಖಾಂಡ್ಯ ಹೋಬಳಿ ಹಿತರಕ್ಷಣಾ ಸಮಿತಿ ಮತದಾರರಲ್ಲಿ ಮನವಿ ಮಾಡಿದೆ.