ಹಾಸನ: ಹಾಸನ ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗಿದ್ದು, ಚುನಾವಣೆ ದಿನಾಂಕವೂ ನಿಗದಿಯಾಗಿದೆ. ಅಧ್ಯಕ್ಷಗಾದಿ ಹಿಡಿಯಲು ರಾಜಕೀಯ ಪಕ್ಷಗಳು ತಮ್ಮ ಬೆಂಬಲಿತ ಅಭ್ಯರ್ಥಿಗಳಿಗಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಈ ಹೊತ್ತಿನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿಯನ್ನು ಅಪಹರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇಂದು ಹಾಸನ ತಾಲೂಕಿನ ಮಡೆನೂರು ಗ್ರಾಮಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕಿತ್ತು. ಬಿಸಿಎಂ(ಎ)ಯಿಂದ ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಆಕಾಂಕ್ಷಿಗಳಿದ್ದರು. ಕಾರೇಕೆರೆಯಿಂದ ಜಯಗಳಿಸಿದ್ದ ಭಾಗ್ಯಮ್ಮ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿದ್ದರು.
ಆದರೆ ಗ್ರಾಮ ಪಂಚಾಯತಿ ಚುನಾವಣೆ ನಂತರ ಬೆಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದ ನಮ್ಮ ಅಮ್ಮನನ್ನು ಜ.28 ರಂದು ಸ್ವಗ್ರಾಮ ಕಾರೇಕೆರೆಗೆ ಆಗಮಿಸುತ್ತಿದ್ದಾಗ ಅಪಹರಿಸಲಾಗಿದೆ. ಲೋಕೇಶ್ ಎಂಬವರನ್ನು ಅಧ್ಯಕ್ಷರನ್ನಾಗಿ ಮಾಡಲು ಮಡೆನೂರು, ಕಾರೇಕೆರೆ ಗ್ರಾಮದ ವೆಂಕಟೇಶ್, ಹಿರಿಯಣ್ಣಗೌಡ, ಸುರೇಂದ್ರ ಎಂಬವರು ನಮ್ಮ ತಾಯಿಯನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ಭಾಗ್ಯಮ್ಮ ಅವರ ಮಗ ಆರೋಪಿಸಿದ್ದಾರೆ.
ಈ ಕುರಿತಂತೆ ಶಾಂತಿಗ್ರಾಮ ಪೊಲೀಸ್ ಠಾಣೆಗೆ ಭಾಗ್ಯಮ್ಮ ಅವರಿಗೆ ಆರೋಗ್ಯ ಸಮಸ್ಯೆಯಿದ್ದು ನನ್ನ ತಾಯಿಯನ್ನು ಆದಷ್ಟು ಬೇಗ ಹುಡುಕಿಕೊಡುವಂತೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.