– ಮೂಲಭೂತ ಸೌಕರ್ಯಗಳಿಂದ ಹಳ್ಳಿ ವಂಚಿತ
– ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ
ಮಡಿಕೇರಿ: ಊರಿಗೆ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಈ ಬಾರಿ ನಡೆಯುವ ಗ್ರಾಮ ಪಂಚಾಯಿತಿ ಚುನಾವಣೆಗೆ ಗ್ರಾಮದಿಂದ ಯಾರು ಮತ ಹಾಕುವುದಿಲ್ಲ ಎಂದು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ತೋಳುರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕೂತಿ ಗ್ರಾಮದ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ಗ್ರಾಮದಲ್ಲಿ ನೆಟ್ ವರ್ಕ್ ಸಮಸ್ಯೆ, ರಸ್ತೆ ಸಮಸ್ಯೆ, ವಿದ್ಯುತ್ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸದಿರುವುದು ಮೂಲ ಕಾರಣವಾಗಿದೆ. ಡಿಸೆಂಬರ್ 22 ನಡೆಯ ಬೇಕಾಗಿರುವ ಚುನಾವಣೆಗೆ ಗ್ರಾಮದಿಂದ ಯಾರು ಮತ ಹಾಕುವುದಿಲ್ಲ ಎಂದಿದ್ದಾರೆ. ಕೊಡಗಿನ ಗಡಿ ಗ್ರಾಮವಾಗಿರುವ ಕೂತಿ ಗ್ರಾಮದಲ್ಲಿ ಈ ವರೆಗೂ ಯಾವುದೇ ನೆಟ್ವರ್ಕ್ ವ್ಯವಸ್ಥೆ ಇಲ್ಲ. ಇದರ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಪತ್ರ, ಪೋಸ್ಟ್ ಕಾರ್ಡ್ ಅಭಿಯಾನ, ಮೈಸೂರು-ಕೊಡಗುಸಂಸದರಾಗಿರುವ ಪ್ರತಾಪ್ ಸಿಂಹ ಅವರಿಗೂ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಭಾಗದಲ್ಲಿ ಸುಮಾರು 40ಕ್ಕೂ ಅಧಿಕ ವಿದ್ಯಾರ್ಥಿಗಳು 2 ಕಿ ಮೀ ತೆರಳಿ ರಸ್ತೆ ಬದಿಯ ಬಸ್ ನಿಲ್ದಾಣವನ್ನು ಪಾಠ ಶಾಲೆಯನ್ನಾಗಿ ಮಾಡಿಕೊಂಡಿದ್ದಾರೆ. ಇನ್ನೂ ಕೆಲವು ವಿದ್ಯಾರ್ಥಿಗಳು ಬೆಟ್ಟದ ಮೇಲೆ ಕುಳಿತು ಆನ್‍ಲೈನ್ ತರಗತಿಯ ಪಾಠವನ್ನು ಕೇಳುತ್ತಿದ್ದಾರೆ. ಇದಲ್ಲದೆ ಗ್ರಾಮದಲ್ಲಿ ಜನರಿಗೆ ಯಾವುದೇ ಆರೋಗ್ಯ ಸಮಸ್ಯೆ ಕಂಡುಬಂದಲ್ಲಿ ತುರ್ತು ವಾಹನಕ್ಕೆ ಕರೆ ಮಾಡಬೇಕಾದರೂ 2 ಕಿ.ಮೀ ಬಂದು ಕರೆ ಮಾಡಬೇಕು. ದೇಶ ಕಾಯಲು ಈ ಗ್ರಾಮ ಸೈನಿಕರನ್ನು ಕೊಟ್ಟಿದೆ. ಅವರ ಜೊತೆ ಕುಟುಂಬಸ್ಥರು ಕರೆ ಮಾಡಿ ಮಾತನಾಡಬೇಕಾದರೂ ನೆಟ್ವರ್ಕ್ ಹುಡಿಕಿಕೊಂಡು 2 ಕಿ.ಮೀ ಹೋಗಿ ಮಾತಾಡಬೇಕು. ಇದೆ ಗ್ರಾಮದ ಮೂಲಕ ಖಾಸಗಿ ಸಂಸ್ಥೆಯೊಂದರ ನೆಟ್ವರ್ಕ್‍ನ ಕೇಬಲ್ ಸಹ ಹಾದು ಹೋಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಈ ಬಾರಿ ಮತದಾನ ಮಾಡುವುದಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.