ಹುಬ್ಬಳ್ಳಿ: ಅವಳಿ ನಗರ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗಾಂಜಾ, ಡ್ರಗ್ಸ್ ಸೇರಿದಂತೆ ಮಾದಕ ವಸ್ತುಗಳ ವಿರುದ್ಧ ಪೊಲೀಸರ ದಿಟ್ಟ ಕ್ರಮ ಮುಂದುವರಿದಿದ್ದು, ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿ ಹುಬ್ಬಳಿಯ ಬೆಂಡಿಕೇರಿ ಪೊಲೀಸರು ಗಾಂಜಾ ಮಾರುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಾದಕ ದ್ರವ್ಯ ವಿರುದ್ಧ ಪೊಲೀಸರ ಕಾರ್ಯಾಚರಣೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ದಂಧೆಕೋರರು ಮತ್ತಷ್ಟು ಎಚ್ಚರಿಕೆಯಿಂದ ತಮ್ಮ ಕೃತ್ಯವನ್ನು ಮುಂದುವರಿಸಿದ್ದು, ಪರಿಣಾಮ ಪೊಲೀಸರು ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿದ್ದಾರೆ.
ಹಲವು ದಿನಗಳಿಂದ ಪೊಲೀಸ ಕಣ್ಣು ತಪ್ಪಿಸಿ ಗಾಂಜಾ ಮಾರಾಟ ಮಾಡುತ್ತಿದ್ದವರ ಬೆನ್ನು ಬಿದ್ದಿರುವ ಪೊಲೀಸರು ಕಳೆದ ಎರಡು ದಿನಗಳಿಂದಲೂ ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿದ್ದರು. ಕೊನೆಗೂ ಗ್ರಾಹಕರ ಸೋಗಿನಲ್ಲಿದ್ದ ಪೊಲೀಸರ ಬಲೆಗೆ ನಾಲ್ವರು ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.
ಬೆಂಡಿಗೇರಿ ಠಾಣೆಯ ವ್ಯಾಪ್ತಿಯಲ್ಲೇ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳಿಂದ 1 ಕೆಜಿಗೂ ಹೆಚ್ಚು ಗಾಂಜಾವನ್ನು ವಶಕ್ಕೆ ಪಡೆಯಲಾಗಿದ್ದು. ನಾಲ್ವರು ಬಂಧಿತರು, ಹುಬ್ಬಳ್ಳಿಯ ವೀರಾಪುರ ಓಣಿ, ಗಣೇಶಪೇಟೆ ಹಾಗೂ ಸೆಟ್ಲಮೆಂಟಿನ ನಿವಾಸಿಗಳೆಂದು ತಿಳಿದು ಬಂದಿದೆ. ಬೆಂಡಿಗೇರಿ ಪೊಲೀಸರ ಈ ಕಾರ್ಯಾಚರಣೆ ಮತ್ತಷ್ಟು ದಂಧೆಕೋರರಿಗೆ ನಡುಕ ಹುಟ್ಟಿಸಿದೆ.