ಮಡಿಕೇರಿ: ಸದಾ ಕ್ಯಾಮೆರಾ ಮುಂದೆ ನಟಿಸಿ ರಂಜಿಸುತ್ತಿದ್ದ ಕಿರುತೆರೆ ನಟ ನಟಿಯರೆಲ್ಲರೂ ಒಟ್ಟಾಗಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಗ್ರಾಮೀಣ ಕ್ರೀಡೆಯನ್ನು ಆಡಿ ಖುಷಿ ಪಟ್ಟಿದ್ದಾರೆ. ಅದರಲ್ಲೂ ಅಶ್ವಿನಿ ನಕ್ಷತ್ರ ಧಾರಾವಾಹಿಯ ಮೂಲಕ ಎಲ್ಲರ ಮನೆಮಾತಾಗಿದ್ದ ನಟ ಜಯರಾಂ ಕಾರ್ತಿಕ್ ಹಳ್ಳಿ ಆಟಕ್ಕೆ ಫಿದಾ ಆಗಿದ್ದಾರೆ.
ಕೊಡಗು ಜಿಲ್ಲೆ ಕುಶಾಲನಗರದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಕ್ರೀಡಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಿರುತೆರೆ ನಟ-ನಟಿಯರು ಹಳ್ಳಿ ಆಟಗಳನ್ನು ಆಡಿ ನೆರೆದಿದ್ದ ಅಭಿಮಾನಿಗಳನ್ನು ರಂಜಿಸಿದ್ದಾರೆ.
ಕುಶಾಲನಗರದ ವಾಸವಿ ಯುವ ಮಂಡಳಿ ಸಾರ್ವಜನಿಕರಿಗಾಗಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣ ಸಂಕ್ರಾಂತಿಯ ಪ್ರಯುಕ್ತ ಗ್ರಾಮೀಣ ಕ್ರೀಡೆ ನಡೆಯುತ್ತಿತ್ತು. ಈ ಕಾರ್ಯಕ್ರಮಕ್ಕೆ ಆಗಮಿಸಿದ ಐರಾವನ್ ಸಿನಿಮಾ ನಟ ಜಯರಾಂ ಕಾರ್ತಿಕ್, ಕಿರುತೆರೆ ನಟಿ ಕಾವ್ಯಶಾಸ್ತ್ರಿ ಹಾಗೂ ತ್ರಲಾ ಅವರು ಸಿಂಗಾರಗೊಂಡಿದ್ದ ಎತ್ತಿನಗಾಡಿ ಏರಿ ಸಂಭ್ರಮಿಸಿದರು. ಬಳಿಕ ಅಪ್ಪಟ ಗ್ರಾಮೀಣ ಕ್ರೀಡೆಯಾದ ತೆಂಗಿನ ಕಾಯಿಗೆ ಕಲ್ಲು ಹೊಡೆಯುವ ಸ್ಪರ್ಧೆಯಲ್ಲಿ ಸ್ಥಳೀಯ ಜನರೊಂದಿಗೆ ಭಾಗವಹಿಸಿ ಎಂಜಾಯ್ ಮಾಡಿದರು.
ನಟಿ ಕಾವ್ಯಶಾಸ್ತ್ರಿ ಮಾಧ್ಯಮಗಳೊಂದಿಗೆ ಮಾತಾನಾಡಿ, ನಮ್ಮ ಹಬ್ಬ ಆಚಾರಗಳು ಉಳಿಯಬೇಕಾದರೆ, ಇಂತಹ ಒಗ್ಗೂಡುವಿಕೆ ಆಗಲೇಬೇಕಾದ ಅಗತ್ಯವಿದೆ. ಇದೇ ಮೊದಲ ಬಾರಿಗೆ ಎತ್ತಿನ ಗಾಡಿ ಏರಿದ್ದು ಖುಷಿಯಾಗಿದೆ. ಅದರಲ್ಲೂ ತೆಂಗಿನಕಾಯಿಗೆ ಕಲ್ಲು ಹೊಡೆಯುವ ಸ್ಪರ್ಧೆ ಅಂತು ಸಖತ್ ಮಜಾ ಇತ್ತು ಎಂದರು.
ಇನ್ನೂ ಇಲ್ಲಿ ನಡೆದ ಗ್ರಾಮೀಣ ಕ್ರೀಡೆಗಳಾದ ಅಳಿಗುಳಿ ಮನೆ, ಚೌಕಾಬಾರ, ಆನೆಕಲ್ಲು, ಲೆಮನ್ ಇನ್ ದ ಸ್ಪೂನ್ ಗೇಮ್‍ಗಳಲ್ಲಿ ಪಟ್ಟಣದ ಮಹಿಳೆಯರು ಮತ್ತು ಸ್ಥಳೀಯರು ಭಾಗವಹಿಸಿ ಸಂಭ್ರಮ ಪಟ್ಟರು. ಸಂಕ್ರಾಂತಿಯಲ್ಲಿ ಭಕ್ಷ್ಯ ಭೋಜನಕ್ಕೆ ಬದಲಾಗಿ ಹುರುಳಿಕಾಳು ಸಾಂಬಾರ್, ಅದಕ್ಕೆ ಬೆಣ್ಣೆ ಮತ್ತು ಮುದ್ದೆ ಊಟವನ್ನು ಸಾರ್ವಜನಿಕರಿಗೆ ಏರ್ಪಡಿಸಲಾಗಿತ್ತು. ಎಲ್ಲರೂ ಗ್ರಾಮೀಣ ಸೊಗಡಿನ ಊಟ ಸವಿದು ಸಖತ್ ಖುಷಿಪಟ್ಟರು.