ಮುಂಬೈ: ಗ್ರಾಮಸ್ಥರಿಗೆ ಕೋವಿಡ್-19 ಸೋಂಕು ಕಂಡು ಬಂದರೆ ಅಂತವರ ಕೊರೊನಾ ಪರೀಕ್ಷೆಯಿಂದ ಹಿಡಿದು, ಆಸ್ಪತ್ರೆ ಹಾಗೂ ಚಿಕಿತ್ಸಾ ವೆಚ್ಚವನ್ನು ಪೂರ್ತಿ ಭರಿಸಲು ಖತಿವಾಲಿ ಗ್ರಾಮಪಂಚಾಯತ್ ಸಜ್ಜಾಗಿದೆ.
ಮಹಾರಾಷ್ಟ್ರದ ಖತಿವಾಲಿ ಗ್ರಾಮಪಂಚಾಯತ್ ತನ್ನ ಗ್ರಾಮದ ಜನರಿಗೆ ಕೊರೊನಾ ಸೋಂಕು ಬಂದರೆ ಅವರ ಚಿಕಿತ್ಸಾ ವೆಚ್ಚ, ಆಸ್ಪತ್ರೆ ಖರ್ಚು ಎಲ್ಲವನ್ನು ಪಂಚಾಯತ್ ವತಿಯಿಂದ ಕೊಡುವುದಾಗಿ ನಿರ್ಧಾರ ಕೈಗೊಂಡಿದೆ. ಗ್ರಾಮಸ್ಥರು ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದ ಬಿಲ್‍ನ್ನು ಪಂಚಾಯತ್‍ಗೆ ಕೊಟ್ಟರೆ ಪಂಚಾಯತ್ ವೆಚ್ಚವನ್ನು ಭರಿಸುವುದಾಗಿ ಪಂಚಾಯತ್‍ನ ಸದಸ್ಯರು ತಿಳಿಸಿದ್ದಾರೆ.
ಮಹಾರಾಷ್ಟ್ರದ ಶಹಾಪುರ ತಾಲೂಕಿನಲ್ಲಿ ಖತಿವಾಲಿ ಗ್ರಾಮವಿದ್ದು, ಗ್ರಾಮದಲ್ಲಿ 6000ಕ್ಕೂ ಹೆಚ್ಚು ಜನಸಂಖ್ಯೆ ಇದೆ. ತಾಲೂಕಿನಲ್ಲಿ ಕೇವಲ 1 ಕೊರೊನಾ ಚಿಕಿತ್ಸಾ ಆಸ್ಪತ್ರೆ ಇದ್ದು, ಈ ಆಸ್ಪತ್ರೆಗಾಗಿ ಖತಿವಾಲಿ ಗ್ರಾಮದಿಂದ 8 ಕಿಲೋ ಮೀಟರ್ ಬರಬೇಕಾಗಿದೆ. ಅದಲ್ಲದೆ ಈಗಾಗಲೇ ತಾಲೂಕು ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚಾಗಿ ಭರ್ತಿಗೊಂಡಿದೆ. ಹಾಗಾಗಿ ಖಾಸಗಿ ಆಸ್ಪತ್ರೆಗೆ ಹೋಗುವುದು ಗ್ರಾಮಸ್ಥರಿಗೆ ಅನಿವಾರ್ಯವಾಗಿದೆ. ಅದರೆ ಗ್ರಾಮದ ಜನರಿಗೆ ಖಾಸಗಿ ಅಸ್ಪತ್ರೆಯ ವೆಚ್ಚ ಭರಿಸುವ ಸಾಮರ್ಥ್ಯ ವಿಲ್ಲದೆ ಇರುವುದರಿಂದಾಗಿ ಪಂಚಾಯತ್‍ನಿಂದ ಆಸ್ಪತ್ರೆ ಖರ್ಚು ಭರಿಸುವ ನಿರ್ಧಾರ ಮಾಡಲಾಗಿದೆ.
ಈಗಾಗಲೇ ಶಹಾಪುರ ತಾಲೂಕಿನಲ್ಲಿ 6,660 ಕೊರೊನಾ ಕೇಸ್ ದಾಖಲಾಗಿದ್ದು,ಇದೀಗ 241 ಸಕ್ರಿಯ ಪ್ರಕರಣಗಳಿವೆ. 170 ಜನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಮಾತನಾಡಿರುವ ಖತಿವಾಲಿ ಗ್ರಾಮಪಂಚಾಯತ್ ಸದಸ್ಯರಾದ ದೇವಿದಾಸ್ ಜಾಧವ್, ಕೊರೊನಾದಿಂದಾಗಿ ಗ್ರಾಮದ ಹಲವು ಜನ ಕೆಲಸ ಕಳೆದುಕೊಂಡಿದ್ದಾರೆ. ಗ್ರಾಮಕ್ಕೆ ಹೊರಭಾಗದ ಜನರ ಆಗಮನವನ್ನು ನಿಷೇಧಿಸಿದ್ದೇವೆ. ಆದರು ಕೂಡ ಗ್ರಾಮದಲ್ಲಿ ಸೋಂಕು ಕಂಡುಬರುತ್ತಿದೆ. ಗ್ರಾಮದ ಜನರು ಸರಿಯಾದ ಚಿಕಿತ್ಸೆ ಸಿಗದೆ ನರಳಾಡುತ್ತಿದ್ದಾರೆ. ಹಾಗಾಗಿ ಪಂಚಾಯತ್ ವತಿಯಿಂದ ಚಿಕಿತ್ಸಾ ವೆಚ್ಚಭರಿಸುವ ನಿರ್ಧಾರ ಕೈಗೊಂಡಿದ್ದೇವೆ ಎಂದು ಸ್ಥಳೀಯ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.