– ಸಮಸ್ಯೆ ಹೇಳಲು ಬಂದ ವ್ಯಕ್ತಿಯನ್ನ ತಳ್ಳಿದ ಎಂಪಿ
ಹಾವೇರಿ: ಸಮಸ್ಯೆ ಹೇಳಲು ಬಂದಿದ್ದ ಗ್ರಾಮಸ್ಥನ ಮೇಲೆ ಬಿಜೆಪಿ ಸಂಸದ ಶಿವಕುಮಾರ್ ಉದಾಸಿ ದರ್ಪ ತೋರಿದ್ದು, ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಂಸದರ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ನವೆಂಬರ್ 20ರಂದು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಸೋಮಸಾಗರ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಭೂಮಿ ಪೂಜೆಗೆ ಸಂಸದ ಶಿವಕುಮಾರ್ ಉದಾಸಿ ಆಗಮಿಸಿದ್ದರು. ಪೂಜೆ ಬಳಿಕ ಸಂಸದರ ಬಳಿ ಗ್ರಾಮದ ಶೇಖಪ್ಪ ಎಂಬವರು ತಮ್ಮ ಏರಿಯಾದ ಸಮಸ್ಯೆ ಹೇಳಲು ದೌಡಾಯಿಸಿದ್ದರು. ಸ್ಥಳೀಯ ಬಿಜೆಪಿ ಮುಖಂಡರೊಬ್ಬರ ಬಳಿ ಸಮಸ್ಯೆ ಹೇಳುತ್ತಿದ್ದಾಗ ಮಧ್ಯ ಪ್ರವೇಶಿಸಿ ಶಿವಕುಮಾರ್ ಉದಾಸಿ, ರಸ್ತೆ ಬಂದಾಗ ಬರ್ತಿಯಿಲ್ಲ ಎಂದರು. ಇದಕ್ಕೆ ಪ್ರತಿಯಾಗಿ ಬಂದದ್ದು ಆಯ್ತು, ನೋಡ್ಕೊಂಡದ್ದು ಆಯ್ತು ಎಂದು ಶೇಖರಪ್ಪ ಪ್ರತ್ಯುತ್ತರ ನೀಡಿದರು.
ಗ್ರಾಮಸ್ಥನ ತಿರುಗೇಟಿಗೆ ಕೋಪಗೊಂಡ ಸಂಸದರು ಆಯ್ತು ನೋಡ್ಕೋ ಹೋಗ್ ಎಂದು ಎಡಗೈಯಿಂದ ಗ್ರಾಮಸ್ಥನನ್ನ ನೂಕಿದರು. ಗ್ರಾಮಸ್ಥನನ್ನು ನೂಕಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.