ನವದೆಹಲಿ: ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಪ್ರತಿ ಸಿಲಿಂಡರ್ಗೆ 25 ರೂ.ಹೆಚ್ಚಳ ಮಾಡಲಾಗಿದೆ. ಈ ಮೂಲಕ ಪ್ರತಿ ಸಿಲಿಂಡರ್ ಬೆಲೆ ರಾಷ್ಟ್ರ ರಾಜಧಾನಿಯಲ್ಲಿ 769 ರೂ.ಗಳಿಂದ 794 ರೂ.ಗೆ ಏರಿಕೆಯಾಗಿದೆ.
ಈ ತಿಂಗಳಲ್ಲಿ 3ನೇ ಬಾರಿ ಸಿಲಿಂಡರ್ ಬೆಲೆ ಹೆಚ್ಚಳವಾದಂತಾಗಿದ್ದು, ಇತ್ತೀಚೆಗೆ ಫೆಬ್ರವರಿ 4ರಂದು 25 ರೂ.ಹೆಚ್ಚಳವಾಗಿತ್ತು. ಬಳಿಕ ಫೆಬ್ರವರಿ 15ರಂದು ಮತ್ತೆ ಬರೋಬ್ಬರಿ 50 ರೂ.ಹೆಚ್ಚಳವಾಗಿತ್ತು. ಇದೀಗ ಮತ್ತೆ 25ರೂ. ಹೆಚ್ಚಳ ಮಾಡಲಾಗಿದೆ. ಈ ಮೂಲಕ ಕೋಲ್ಕತ್ತಾದಲ್ಲಿ 795ರೂ.ನಿಂದ 820 ರೂ.ಗೆ ಏರಿಕೆಯಾಗಿದೆ. ಮುಂಬೈನಲ್ಲಿ 769ರೂ.ನಿಂದ 794ರೂ.ಗೆ ತಲುಪಿದೆ. ಚೆನ್ನೈನಲ್ಲಿ 785 ರೂ.ನಿಂದ 846.50 ರೂ.ಗೆ ಏರಿಕೆಯಾಗಿದೆ. ಹೈದರಾಬಾದ್ನಲ್ಲಿ 821.50ರೂ.ನಿಂದ 846.50 ರೂ.ಗೆ ತಲುಪಿದೆ.
ಮೂರು ತಿಂಗಳಲ್ಲಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಬರೋಬ್ಬರಿ 200ರೂ. ಹೆಚ್ಚಳವಾಗಿದ್ದು, ಕಳೆದ ವರ್ಷ ಡಿಸೆಂಬರ್ ನಲ್ಲಿ ಸಹ 100 ರೂ.ಹೆಚ್ಚಳ ಮಾಡಲಾಗಿತ್ತು. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ನಡುವೆಯೇ ಸಿಲಿಂಡರ್ ಬೆಲೆಯಲ್ಲಿ ಸಹ ಏರಿಕೆಯಾಗುತ್ತಿದೆ.
ಸರ್ಕಾರ ಪ್ರತಿ ವರ್ಷ 14.2 ಕೆಜಿ ತೂಕದ 12 ಸಿಲಿಂಡರ್ಗಳನ್ನು ಉಚಿತವಾಗಿ ನೀಡುತ್ತಿದೆ. ಕೋವಿಡ್ 19 ಕಾರಣದಿಂದ ಆದಾಯ ಕೊರತೆ ಎದುರಿಸುತ್ತಿರುವ ಕೇಂದ್ರ ಸರ್ಕಾರ ಗ್ರಾಹಕರಿಗೆ ಸಬ್ಸಿಡಿ ಹಣದ ನೇರ ವರ್ಗಾವಣೆ ನಿಲ್ಲಿಸಿರುವ ಹಿನ್ನೆಲೆಯಲ್ಲಿ ಪೂರ್ಣ ಹೊರೆಯನ್ನು ಗ್ರಾಹಕರೇ ಭರಿಸಬೇಕಾಗಿದೆ.
ಎಲ್ಪಿಜಿ ಸಿಲಿಂಡರ್ ದರವನ್ನು ತೈಲ ಕಂಪನಿಗಳು ಪರಿಷ್ಕರಿಸುತ್ತಿರುತ್ತವೆ. ಅಂತರರಾಷ್ಟ್ರೀಯ ಇಂಧನ ದರಗಳು ಮತ್ತು ಅಮೆರಿಕ ಡಾಲರ್-ರೂಪಾಯಿ ವಿನಿಮಯ ದರಗಳನ್ನು ಅವಲಂಬಿಸಿ, ಬೆಲೆಗಳು ಹೆಚ್ಚಾಗುತ್ತದೆ ಮತ್ತು ಇಳಿಕೆಯಾಗುತ್ತದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲೂ ಪೆಟ್ರೋಲ್, ಡೀಸೆಲ್, ಎಲ್ಪಿಜಿ ಸಿಲಿಂಡರ್ ದರ ಏರಿಕೆ ಆಗುತ್ತಿದೆ.