ಚಿಕ್ಕಮಗಳೂರು: ಬೈಕಿನಲ್ಲಿ ಗೋ ಮಾಂಸವನ್ನ ಸಾಗಿಸುತ್ತಿದ್ದ ಯುವಕರು ದೂರದಲ್ಲಿದ್ದ ಯುವಕರ ಗುಂಪನ್ನ ಕಂಡು ಬೈಕ್ ಬಿಟ್ಟು ಎಸ್ಕೇಪ್ ಆಗಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪ ನಡೆದಿದೆ.
ಜಯಪುರ ಸಮೀಪದ ಕೊಗ್ರೆ ಗ್ರಾಮದ ಅಬ್ಬಿಕಲ್ಲು ತಿರುವಿನಲ್ಲಿ ನಾಲ್ಕೈದು ಯುವಕರ ಗುಂಪು ನಿಂತಿತ್ತು. ಇದೇ ಮಾರ್ಗವಾಗಿ ಸಿಮೆಂಟ್ ಚೀಲದಲ್ಲಿ ಗೋಮಾಂಸವನ್ನ ತುಂಬಿಕೊಂಡು ಬೈಕಿನಲ್ಲಿ ಹೋಗುತ್ತಿದ್ದ ಇಬ್ಬರು ಯುವಕರ ಗುಂಪನ್ನ ನೋಡಿದ್ದಾರೆ. ಕೂಡಲೇ ಸಿಕ್ಕಿಬಿದ್ದರೆ ಧರ್ಮದೇಟು ಗ್ಯಾರಂಟಿ ಎಂದು ಮಾಂಸದ ಚೀಲವನ್ನ ರಸ್ತೆ ಬದಿಯೇ ಎಸೆದು, ಬೈಕನ್ನೂ ಅಲ್ಲೇ ಬಿಟ್ಟು ಕಾಡಿನಲ್ಲಿ ಎಸ್ಕೇಪ್ ಆಗಿದ್ದಾರೆ ಎಂದು ಹೇಳಲಾಗಿದೆ.
Advertisement
ರಸ್ತೆ ಬದಿ ಬೈಕ್ ಬಿದ್ದಿರುವುದನ್ನ ಕಂಡ ಯುವಕರ ಗುಂಪು ಬೈಕ್ ಬಳಿ ಹೋದಾಗ ಸಿಮೆಂಟ್ ಚೀಲದಲ್ಲಿ ಗೋ ಮಾಂಸ ಇರುವುದು ಪತ್ತೆಯಾಗಿದೆ. ನಂತರ ಯುವಕರ ಗುಂಪು ಜಯಪುರ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಮೇಲ್ನೋಟಕ್ಕೆ ಬೈಕಿನಲ್ಲಿ ಮಾಂಸವನ್ನ ಸಾಗಿಸುತ್ತಿದ್ದ ಯುವಕರು ಮಾಂಸವನ್ನ ಮಾರಾಟ ಮಾಡುವ ಉದ್ದೇಶದಿಂದ ತೆಗೆದುಕೊಂಡು ಹೋಗುತ್ತಿದ್ದರು ಎಂದು ಹೇಳಲಾಗಿದೆ. ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ಮಲೆನಾಡಲ್ಲಿ ಇತ್ತೀಚೆಗೆ ಇಂತಹಾ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದೊಂದು ವಾರದ ಹಿಂದಷ್ಟೆ ಕಾಡಿನಲ್ಲಿ ಹಸುವನ್ನ ಕೊಂದು ಮಾಂಸವನ್ನ ಮಾರಾಟ ಮಾಡಲು ಲಗೇಜ್ ಆಟೋದಲ್ಲಿ ಸಾಗಿಸುವಾಗ ಸ್ಥಳೀಯರ ಕೈಗೆ ಸಿಕ್ಕಿಬಿದ್ದ ಇಬ್ಬರು ಒದೆ ತಿಂದಿದ್ದರು. ಮಲೆನಾಡಲ್ಲಿ ಇತ್ತೀಚೆಗೆ ಗೋ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಜೊತೆಗೆ ಹಸುವನ್ನ ಕದ್ದು ಮಾಂಸ ಮಾಡಿ ಕೊಂಡೊಯ್ಯುವ ಪ್ರಕರಣಗಳು ಹೆಚ್ಚಾಗಿವೆ. ಹಾಗಾಗಿ ಪೊಲೀಸರು ಗೋಕಳ್ಳತನಕ್ಕೆ ಬ್ರೇಕ್ ಹಾಕಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.