ರಾಯಚೂರು: ಜಿಲ್ಲೆಗೆ ಸಚಿವ ಸ್ಥಾನ ಸಿಗದ ಹಿನ್ನೆಲೆ ನಗರದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟದಿಂದ ಗೋ ಬ್ಯಾಕ್ ಉಸ್ತುವಾರಿ ಸಚಿವರೇ ಅಂತ ನೂತನ ಸಚಿವ ಸೋಮಣ್ಣ ವಿರುದ್ದ ಪ್ರತಿಭಟನೆ ನಡೆಸಲಾಯಿತು.
ಪ್ರವಾಹ ಪರಸ್ಥಿತಿ ಹಾಗೂ ಕೋವಿಡ್ ಮುನ್ನೆಚ್ಚರಿಕೆ ಕುರಿತು ಪರಿಶೀಲನೆ ನಡೆಸಲು ರಾಯಚೂರಿಗೆ ಆಗಮಿಸಿದ ನೂತನ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣಗೆ ಪ್ರತಿಭಟನೆ ಬಿಸಿಮುಟ್ಟಿದೆ. ನಗರದ ಟಿಪ್ಪುಸುಲ್ತಾನ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿ ಹೋರಾಟಗಾರರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲೆಗೆ ಸಚಿವ ಸ್ಥಾನ ನೀಡಿ ಜಿಲ್ಲೆಯವರನ್ನೆ ಉಸ್ತುವಾರಿ ಮಾಡಲು ಹೋರಾಟಗಾರರು ಆಗ್ರಹಿಸಿದ್ದಾರೆ. ಈ ಹಿಂದೆ ಬೇರೆ ಜಿಲ್ಲೆಯವರು ಉಸ್ತುವಾರಿಯಾಗಿ ಜಿಲ್ಲೆಯಲ್ಲಿ ಏನೂ ಅಭಿವೃದ್ಧಿ ಕೆಲಸ ಮಾಡಿಲ್ಲ.ಬೇರೆ ಜಿಲ್ಲೆಯವರಾದ ನೀವೂ ಜಿಲ್ಲೆಗೆ ಬೇಡ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಪ್ರವಾಹ ಪರಿಸ್ಥಿತಿ ಹಾಗೂ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳ ಪರಿಶೀಲನೆಗೆ ರಾಯಚೂರಿಗೆ ಆಗಮಿಸಿರುವ ನೂತನ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಬಳಿಕ ಮಾತನಾಡಿ, ನನಗೆ ವಸತಿ ಖಾತೆ ಹೊಸದಲ್ಲ. ಕೊಟ್ಟ ಖಾತೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಿಕೊಂಡು ಕೆಲಸ ಮಾಡಬೇಕು. ಯಾವುದೇ ಖಾತೆ ನೀಡಿದರು ಕೂಡ ಆ ಖಾತೆಗೆ ನಾವು ಶಕ್ತಿ ತುಂಬಬೇಕು ಎಂದರು.
ನನಗೆ ಬಂಧಿಖಾನೆ ಖಾತೆ ಕೊಟ್ಟಾಗ ನಾನು ಕೆಲಸ ಮಾಡಿದ್ದೇನೆ. ಅದನ್ನು ಸಮರ್ಥವಾಗಿ ಎದುರಿಸಿ ಅಭಿವೃದ್ದಿ ಮಾಡಿದ್ದೇನೆ. ಖಾತೆಯನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು. ವಸತಿ ಖಾತೆಯನ್ನು ನಾನು ಮತ್ತೆ ನಿಭಾಯಿಸುತ್ತೇನೆ. ಖಾತೆ ಬಗ್ಗೆ ಸಚಿವ ಆನಂದ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಮಾತನಾಡಿದ ಸೋಮಣ್ಣ, ಆನಂದ್ ಸಿಂಗ್ ನನ್ನ ಸಹೋದರ ಅವರ ಜೊತೆ ನಾನು ಮಾತನಾಡುತ್ತೇನೆ. ಯಾವುದೋ ಸಂದರ್ಭದಲ್ಲಿ ಮಾತನಾಡಿ ಅವರ ಭಾವನೆ ವ್ಯಕ್ತಪಡಿಸಿದ್ದಾರೆ. ನಮ್ಮ ಜೊತೆ ಅವರನ್ನೂ ಕರೆದುಕೊಂಡು ಹೋಗುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಖಾತೆ ಹಂಚಿಕೆ ಸಿಎಂ ಪರಮಾಧಿಕಾರ, ವಸತಿ ಖಾತೆ ಮತ್ತೆ ನಿಭಾಯಿಸುತ್ತೇನೆ: ವಿ.ಸೋಮಣ್ಣ