– ಕಾಂಗ್ರೆಸ್ ಸಂಸ್ಕೃತಿ ವಿವರಿಸಿದ ಸಚಿವರು
ಬೆಂಗಳೂರು: ಕಾಂಗ್ರೆಸ್ಸಿನವರು ಮುಂಬರುವ ಗ್ರಾಮ ಪಂಚಾಯ್ತಿ ಚುನಾವಣೆ ಪ್ರಣಾಳಿಕೆಯಲ್ಲಿ ನಾವು ಗೋಹತ್ಯೆ ನಿಷೇಧ ಮಾಡಲ್ಲ ಅಂತ ಹೇಳಲಿ. ಗೋ ಕಡಿಯೋಕೆ ಅವಕಾಶ ಕೊಡ್ತೀವಿ ಅಂತ ತಾಕತ್ ಇದ್ದರೆ ಘೋಷಣೆ ಮಾಡಲಿ ಎಂದು ಸಚಿವ ಈಶ್ವರಪ್ಪ ಸವಾಲೆಸೆದಿದ್ದಾರೆ.
ವಿಧಾನಸೌಧದಲ್ಲಿ ಲವ್ ಜಿಹಾದ್ ಮತ್ತು ಗೋಹತ್ಯೆ ನಿಷೇಧ ಕಾಯ್ದೆಗೆ ಕಾಂಗ್ರೆಸ್ ವಿರೋಧ ವಿಚಾರಕ್ಕೆ ಪ್ರತಿಕ್ರಿಯಿಸಿ, ಗೋವನ್ನ ನಾವು ತಾಯಿ ಅಂತೀವಿ. ಗೋವನ್ನ ತಾಯಿ ಸ್ವರೂಪ ಅಂತ ನಾವು ಕಾಣ್ತೀವಿ. ನಮ್ಮ ತಾಯಿಗೆ ವಯಸ್ಸಾಯ್ತು ಅಂತ ನಾವು ಎಲ್ಲಾದ್ರು ಬಿಡ್ತೀವಾ?, ಇದನ್ನ ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಲಿ. ನಾವು ಗೋಹತ್ಯೆ ನಿಷೇಧ ಕಾಯ್ದೆ ತಂದೇ ತರುತ್ತೇವೆ ಎಂದು ಸಚಿವರು ಖಡಕ್ಕಾಗಿ ನುಡಿದಿದ್ದಾರೆ.
ದೇಶದ ಜನ ನಾವು ಅಭಿವೃದ್ಧಿ ಮಾಡಿದ್ದೇವೆ ಅಂತ ಕೇಂದ್ರದಲ್ಲಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನ ಜನ ಗೆಲ್ಲಿಸಿದ್ದಾರೆ. ಸಿದ್ದರಾಮಯ್ಯ ಎಲ್ಲರ ಅಭಿವೃದ್ಧಿಯನ್ನೂ ಕಾಂಗ್ರೆಸ್ ಮಾಡಿದೆ ಅಂದರು. ಆದರೆ ಸರ್ಕಾರಕ್ಕೆ ಯಾಕೆ ಸೋಲು ಆಯ್ತು. ಅವರೇ ಯಾಕೆ ಸೋತ್ರು. ನಾವು ಅಭಿವೃದ್ಧಿ ಮಾಡಿದ್ದೇವೆ. ಈಗ ಗೋಹತ್ಯೆ ನಿಷೇಧ ಕೂಡ ಮಾಡುವುದಾಗಿ ತಿಳಿಸಿದರು. ಗೋಹತ್ಯೆ ಮಾಡಿ ಅಂತ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರ ಮನೆಯವರಿಗೆ ಹೇಳಲಿ. ಲಕ್ಷ್ಮಿ ಪೂಜೆ ಸಮಯದಲ್ಲಿ ಗೋ ಪೂಜೆ ಮಾಡಬೇಡಿ ಅಂತ ಅವರ ಮನೆಯವರಿಗೆ ಹೇಳಲಿ. ಆಗ ಅವರನ್ನ ಮನೆಗೆ ಸೇರಿಸೊಲ್ಲ, ಅವರಿಗೆ ಊಟ ಹಾಕೊಲ್ಲ ಎಂದರು.
ಲವ್ ಜಿಹಾದ್ ಕಾಯ್ದೆ ವಿಚಾರ ಸಂಬಂಧ ಮಾತನಾಡಿ, ಸಿದ್ದರಾಮಯ್ಯ ಕ್ರಾಸ್ ಬೀಡ್ ಹೇಳಿಕೆಗೆ ತಿರುಗೇಟು ನೀಡಿದ ಈಶ್ವರಪ್ಪ, ಇಂದಿರಾಗಾಂಧಿ-ಫಿರೋಜ್ ಗಾಂಧಿ ಕ್ರಾಸ್ ಬೀಡ್ ಅಂತ ಸಿದ್ದರಾಮಯ್ಯ ಒಪ್ತಾರಾ?, ರಾಜೀವ್ ಗಾಂಧಿ- ಸೋನಿಯಾ ಗಾಂಧಿ ಏನು?, ಪ್ರಿಯಾಂಕಾ ಗಾಂಧಿ- ರಾಬರ್ಟ್ ವಾದ್ರ ಏನು?, ಪ್ರೀತಿ ಮಾಡಿ ಮೋಸ ಮಾಡಿ ಹೆಣ್ಣು ಮಕ್ಕಳನ್ನ ಮಾರಾಟ ಮಾಡೋಕೆ ನಾವು ಬಿಡಬೇಕಾ?, ನಮ್ಮ ಸಂಸ್ಕೃತಿಗೆ ವಿರೋಧವಾದುದನ್ನ ನಾವು ಸಹಿಸೊಲ್ಲ. ಹೀಗಾಗಿ ನಾವು ಲವ್ ಜಿಹಾದ್ ಕಾನೂನು ಜಾರಿಗೆ ತರುತ್ತಿದ್ದೇವೆ ಎಂದು ತಿಳಿಸಿದರು.
ಈ ದೇಶದ ಸಂಸ್ಕೃತಿಯೇ ಕಾಂಗ್ರೆಸ್ಸಿಗೆ ಗೊತ್ತಿಲ್ಲ. ಯಾರ ಹೆಣ್ಣು ಮಗಳನ್ನು ಯಾರು ಬೇಕಾದರೂ ಎತ್ತಿಕೊಂಡು ಹೋಗೋ ಪರಿಸ್ಥಿತಿ ಇದೆ. ಪ್ರೀತಿ ಮಾಡಿದಂಗೆ ನಾಟಕ ಮಾಡಿ ಕಂಡವರ ಮನೆ ಹೆಣ್ಣು ಮಕ್ಕಳನ್ನು ಎತ್ಕೊಂಡು ಹೋಗಿ ವಿದೇಶದಲ್ಲಿ ಮಾರಾಟ ಮಾಡೋ ಘಟನೆ ನಮ್ಮ ಬಳಿ ಇದೆ. ನನ್ನ ಮಕ್ಕಳನ್ನೂ ಅವರ ಮಕ್ಕಳನ್ನೂ ಎತ್ಕೊಂಡು ಹೋದ್ರೆ ಆಗತ್ತಾ?, ಲೆಕ್ಕವಿಲ್ಲದಷ್ಟು ಜನ ಹೆಣ್ಣುಮಕ್ಕಳನ್ನು ಪ್ರೀತಿ ಮಾಡಿದಂತೆ ನಾಟಕ ಮಾಡ್ತಾರೆ. ಅಂತರ್ಜಾತಿ ಮದುವೆಗೆ ನಾನು ವಿರೋಧ ಮಾಡ್ತಿಲ್ಲ. ಆದರೆ ಲವ್ ಜಿಹಾದ್ ನಂತ ಮೋಸವನ್ನು ವಿರೋಧ ಮಾಡ್ತೇವೆ. ಕ್ರಾಸ್ ಬ್ರೀಡ್ ಅನ್ನೋದು ನಾಯಿಗಳಿಗೆ ಆಗೋದು. ಕಾಂಗ್ರೆಸ್ಸಿನವರಿಗೆ ನಾಯಿಗಳಿಗೂ, ಮನುಷ್ಯರಿಗೂ ಇರುವ ವ್ಯತ್ಯಾಸ ಗೊತ್ತಿಲ್ವಾ ಇವರಿಗೆ. ಇದು ಕಾಂಗ್ರೆಸ್ ಸಂಸ್ಕೃತಿ ಎಂದು ಈಶ್ವರಪ್ಪ ವಾಗ್ದಾಳಿ ಡನೆಸಿದರು.