– ಸಾರಿಗೆ ನೌಕರರ ಬೇಡಿಕೆ ಈಡೇರಿಸೋದು ಕಷ್ಟ
– ಸಚಿವ ಸ್ಥಾನಕ್ಕೆ ಆರ್. ಶಂಕರ್ ಲಾಬಿ
ಬೆಂಗಳೂರು: ಗೋಹತ್ಯೆ ನಿಷೇಧ ಕಾಯಿದೆ ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಂಭ್ರಮ ವ್ಯಕ್ತಪಡಿಸಿದ್ದು, ಇಂದು ಗೋ ಪೂಜೆ ಮಾಡಿದ್ದಾರೆ.
ಕಾವೇರಿ ನಿವಾಸದಲ್ಲಿ ಸಿಎಂ ಅವರು ಗೋವಿಗೆ ಪೂಜೆ ನೆರವೇರಿಸಿದ್ದು, ಪೂಜೆಯಲ್ಲಿ ಪುತ್ರ, ಸಂಸದ ಬಿ.ವೈ. ರಾಘವೇಂದ್ರ ಹಾಗೂ ಬಿಡಿಎ ಅಧ್ಯಕ್ಷ ಎಸ್.ಆರ್ ವಿಶ್ವನಾಥ್ ಮತ್ತಿರರು ಭಾಗಿಯಾಗಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮೇಲ್ಮನೆಯಲ್ಲಿ ಗೋಹತ್ಯೆ ವಿಧೇಯಕ ಮಂಡನೆಯಾಗದ ವಿಚಾರಕ್ಕೆ ಪ್ರತಿಕ್ರಿಯಿಸಿ, ಸುಗ್ರೀವಾಜ್ಞೆ ಮೂಲಕ ಕಾಯಿದೆ ಜಾರಿ ಮಾಡುತ್ತೇವೆ. ಮಂಗಳವಾರ ಒಂದು ದಿನದ ಅಧಿವೇಶನ ಕರೆಯಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ರಾಜ್ಯಪಾಲರ ಜೊತೆಯೂ ಚರ್ಚೆ ಮಾಡಿದ್ದೇವೆ ಎಂದು ಹೇಳುತ್ತಾ ನಿನ್ನೆ ಅಧಿವೇಶನ ಬೇಗ ಮುಕ್ತಾಯಗೊಳಿಸಿದ್ದಕ್ಕೆ ಬಿಎಸ್‍ವೈ ಅಸಮಾಧಾನ ವ್ಯಕ್ತಪಡಿಸಿದರು.
ಮಂಗಳವಾರ ಮತ್ತೊಮ್ಮೆ ಅಧಿವೇಶನ ಕರೆಯಲು ರಾಜ್ಯಪಾಲರಿಗೆ ಪತ್ರ ಕಳುಹಿಸಲಾಗಿದೆ. ಯಾವುದೇ ಕಾರಣಕ್ಕೂ ಅಧಿವೇಶನ ಮುಂದೂಡುವ ಅಧಿಕಾರ ಸಭಾಪತಿಗಿಲ್ಲ. ಹಿಂದೆ ಬಿಎಸಿ ಸಭೆಯಲ್ಲಿ ಮಂಗಳವಾರದವರೆಗೂ ಸದನ ನಡೆಸಬೇಕು ಎಂದು ತೀರ್ಮಾನ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಸಭಾಪತಿ ಗಳೇ ಇದ್ದರು. ಆದರು ಕೂಡ ದಿಢೀರನೆ ಮುಂದೆ ಹಾಕಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ @BSYBJP ರವರು ತಮ್ಮ ಅಧಿಕೃತ ನಿವಾಸ 'ಕಾವೇರಿ'ಯಲ್ಲಿ ಇಂದು ಗೋಪೂಜೆ ನೆರವೇರಿಸಿದರು. pic.twitter.com/uqbzxzydtD
— CM of Karnataka (@CMofKarnataka) December 11, 2020
ಸಾರಿಗೆ ನೌಕರರ ಪ್ರತಿಭಟನೆ ಸಂಬಂಧ ಮಾತನಾಡಿದ ಅವರು, ಸಾರಿಗೆ ನೌಕರರು ಪ್ರತಿಭಟನೆ ಕೈ ಬಿಡುವಂತೆ ಸಿಎಂ ಮನವಿ ಮಾಡಿದರು. ಆದರೆ ಕೋವಿಡ್ ಹಾಗೂ ಆರ್ಥಿಕ ಸಂಕಷ್ಟ ಪರಿಸ್ಥಿತಿಯಲ್ಲಿ ಅವರ ಬೇಡಿಕೆ ಸದ್ಯ ಈಡೇರಿಸೋದು ಕಷ್ಟ ಎಂದರು. ಇದೇ ವೇಳೆ ಅವರನ್ನು ಕರೆದು ಮಾತಾಡ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಈಗಾಗಲೇ ಸಂಬಂಧಿಸಿದ ಸಚಿವರು ಅವರ ಜೊತೆ ಚರ್ಚೆ ಮಾಡಿದ್ದಾರೆ ಎಂದರು.
ಇನ್ನು ಚಳಿಗಾಲದ ಅಧಿವೇಶನ ಮುಕ್ತಾಯವಾದ ಬೆನ್ನಲ್ಲೇ ಶುರುವಾದ ಮಂತ್ರಿ ಸ್ಥಾನಕ್ಕೆ ಲಾಬಿ ಜೋರಾಗಿದೆ. ಕಾವೇರಿ ನಿವಾಸದಲ್ಲಿ ಸಿಎಂ ಭೇಟಿ ಮಾಡಿದ ಆರ್ ಶಂಕರ್, ಸಂಪುಟ ವಿಸ್ತರಣೆ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಇಷ್ಟು ದಿನ ಸದನ ಅಂತ ಸುಮ್ಮನೆ ಇದ್ದ ಅರ್ ಶಂಕರ್, ಇದೀಗ ಸದನ ಮುಕ್ತಾಯವಾಗ್ತಿದ್ದಂತೆ ಮತ್ತೆ ಮಂತ್ರಿ ಸ್ಥಾನಕ್ಕಾಗಿ ಒತ್ತಡ ಶುರುವಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.