– ತಿಂಡಿ ತೆಗೆದುಕೊಳ್ಳಲೆಂದು ಮನೆಯಿಂದ ಗೋಧಿ ಕದ್ದ ಬಾಲಕ
ಲಕ್ನೋ: ಗೋಧಿ ಕದ್ದನೆಂದು ಸಿಟ್ಟಿಗೆದ್ದ ತಂದೆಯೊಬ್ಬ ತನ್ನ 11 ವರ್ಷದ ಮಗನ ಬಟ್ಟೆಬಿಚ್ಚಿ, ಕೈ-ಕಾಲು ಕಟ್ಟಿ ಹಿಗ್ಗಾಮುಗ್ಗ ಥಳಿಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಆರೋಪಿ ತಂದೆಯನ್ನು(45) ವರ್ಷದ ಗುದ್ದು ಖಾನ್ ಎಂದು ಗುರುತಿಸಲಾಗಿದೆ. ತಿಂಡಿ ತೆಗೆದುಕೊಳ್ಳಲು ಬಾಲಕನ ಕೈಯಲ್ಲಿ ಹಣವಿರಲಿಲ್ಲ. ಹೀಗಾಗಿ ಆತ ತನ್ನ ಮನೆಯಲ್ಲಿದ್ದ ಗೋಧಿಯನ್ನು ಅಂಗಡಿಯವನಿಗೆ ಕೊಟ್ಟು ತಿಂಡಿ ಖರೀದಿಸಿದ್ದಾನೆ. ಈ ವಿಚಾರ ತಿಳಿದ ತಂದೆ ರೊಚ್ಚಿಗೆದ್ದು, ಮಗನ ಬಟ್ಟೆ ಬಿಚ್ಚಿ, ಕೈ-ಕಾಲು ಕಟ್ಟಿ ಹಿಗ್ಗಾಮುಗ್ಗ ಥಳಿಸಿದ್ದಾರೆ.
ಮಗನಿಗೆ ತಂದೆ ಹೊಡೆಯುತ್ತಿರುವುದನ್ನು ಕಂಡರೂ ನೆರೆಮನೆಯವರು ಬಾಲಕನ ಸಹಾಯಕ್ಕೆ ಬಂದಿಲ್ಲ. ಬದಲಾಗಿ ನಿಂತು ನೋಡುತ್ತಿದ್ದ ಕೆಲವರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಿದ್ದರು. ಬಳಿಕ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾರೆ. ಹೀಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಾಗಿ ಬಲೆ ಬೀಸಿದ್ದಾರೆ.
ಅಂತೆಯೇ ಮಿವಾಲಿ ಗ್ರಾಮದಿಂದ ಆರೋಪಿ ತಂದೆಯನ್ನು ಪೊಲಿಸರು ಬಂಧಿಸಿದ್ದಾರೆ. ಇತ್ತ ಗಾಯಾಳು ಬಾಕನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಇನ್ನು ಘಟನೆಯ ಸಂಬಂಧಿಸಿದಂತೆ ಬಾಲಕನ ಹೇಳಿಕೆಗಳನ್ನು ಪಡೆದುಕೊಳ್ಳಲಾಗುತ್ತದೆ ಎಂದು ಪೊಲೀಸ್ ಅಧಿಕಾರಿ ರವಿ ಕುಮಾರ್ ತಿಳಿಸಿದ್ದಾರೆ.
ಘಟನೆಯ ಬಗ್ಗೆ ವಿವರಿಸಿದ ಸ್ಥಳೀಯ ನಿವಾಸಿಗಳು, ಸ್ವಲ್ಪ ಗೋಧಿ ಕದ್ದ ಎಂದು ತಂದೆ ತನ್ನ ಮಗನ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೆ ಬಾಲಕನ ಮೇಲೆ ಬಿಸಿ ನೀರು ಎರಚಿ ಹಿಗ್ಗಾಮುಗ್ಗ ಥಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಮಗನ ಮೇಲೆ ಹಲ್ಲೆ ನಡೆಸಿದಾಗ ಆರೋಪಿ ಕುಡಿದಿರಲಿಲ್ಲ. ಮೂರು ದಿನಗಳ ಹಿಂದೆಯಷ್ಟೇ ಜಗಳವಾಡಿ ಆರೋಪಿ ಪತ್ನಿ ಆಕೆಯ ಸಹೋದರಿ ಮನೆಗೆ ತೆರಳಿದ್ದರು. ನನ್ನ ಮಗನ ನಡೆ ನನಗೆ ಇಷ್ಟವಾಗಲಿಲ್ಲ. ಹೀಗಾಗಿ ಕೋಪದಿಂದ ಆತನಿಗೆ ಹೊಡೆದೆ ಎಂದು ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಸದ್ಯ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.