– ಮರು ತಯಾರಿಕೆಗಾಗಿ ದಿನಗೂಲಿ ಕಾರ್ಮಿಕರ ನೇಮಕ
– ಮಾಹಿತಿ ಮೇರೆಗೆ ದಾಳಿ, ಮಾಲಕಿ ಅರೆಸ್ಟ್
ಹನೋಯಿ: ಉಪಯೋಗಿಸಿ ಬಿಸಾಡಿದ್ದ ಬರೋಬ್ಬರಿ ಮೂರು ಲಕ್ಷಕ್ಕೂ ಅಧಿಕ ಕಾಂಡೋಮ್‍ಗಳನ್ನು ಮರುಬಳಕೆ ಮಾಡಲು ಸಂಗ್ರಹಿಸಿಟ್ಟಿದ್ದ ಗೋದಾಮಿನ ಮೇಲೆ ವಿಯೆಟ್ನಾ ಪೊಲೀಸರು ದಾಳಿ ಮಾಡಿದ್ದಾರೆ. ಅಲ್ಲದೇ ಕಾಂಡೋಮ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಮರುಬಳಕೆ ಮಾಡಲಾಗುತ್ತಿದ್ದ 3,24,000 ಉಪಯೋಗಿಸಿದ ಕಾಂಡೋಮ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೊದಲಿಗೆ ಉಪಯೋಗಿಸಿದ್ದ ಕಾಂಡೋಮ್‍ಗಳನ್ನು ಸಂಗ್ರಹಿಸಿ ರಾಸಾಯನಿಕಯುಕ್ತ ನೀರಿನಿಂದ ಶುಚಿಗೊಳಿಸಲಾಗುತ್ತಿತ್ತು. ನಂತರ ಅದನ್ನು ಮರದ ಕೋಲಿನಿಂದ ಮರು ರೂಪಿಸಲಾಗುತ್ತಿತ್ತು. ಈ ಕೆಲಸವನ್ನು ಮಾಡಲು ದಿನಗೂಲಿ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗಿತ್ತು.
ಇದು ದಕ್ಷಿಣ ವಿಯೆಟ್ನಾಂನ ಭಾಗದಲ್ಲಿರುವ ಬಿನ್ಹ್ ಡುವಾಂಗ್ ಪ್ರಾಂತ್ಯದ ಗೋದಾಮಿನಲ್ಲಿ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಗೋದಾಮಿನ ಮೇಲೆ ದಾಳಿ ನಡೆಸಿದ್ದಾರೆ. ಆಗ ಬಳಸಿದ ಕಾಂಡೋಮ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಮರು ಪ್ಯಾಕೇಜ್ ಮಾಡಿ ಸುರಕ್ಷಿತವಲ್ಲದ ಕಾಂಡೋಮ್‍ಗಳನ್ನು ಮತ್ತೆ ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತಿತ್ತು. ಈಗಾಗಲೇ ಸಾವಿರಾರು ಸಾರ್ವಜನಿಕರಿಗೆ ಮಾರಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಗೋದಾಮಿನ ಮಾಲಕಿ ಫಾಮ್ ಥಿ ಥನ್ ನ್ಗೋಕ್ (33)ಳನ್ನು ಪೊಲೀಸರು ಬಂಧಿಸಿದ್ದಾರೆ. ಅಪರಿಚಿತ ವ್ಯಕ್ತಿಯಿಂದ ಒಂದು ತಿಂಗಳ ಹಿಂದೆ ಕಾಂಡೋಮ್ ಸ್ವೀಕರಿಸಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ಕಾಂಡೋಮ್‍ಗಳನ್ನು ಸಾಕ್ಷಿ ಸಮೇತ ವಶಪಡಿಸಿಕೊಳ್ಳಲಾಗಿದೆ. ಆದರೆ ಅವುಗಳನ್ನು ಅಪಾಯಕಾರಿ ವೈದ್ಯಕೀಯ ತ್ಯಾಜ್ಯವೆಂದು ಪರಿಗಣಿಸಲಾಗಿರುವುದರಿಂದ ತಕ್ಷಣ ವಿಲೇವಾರಿ ಮಾಡಲಾಗಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈಗಾಗಲೇ ಎಷ್ಟು ಕಾಂಡೋಮ್‍ಗಳನ್ನು ಮಾರಾಟ ಮಾಡಲಾಗಿದೆ ಎಂದು ತಿಳಿದಿಲ್ಲ. ಆದರೆ ಪೊಲೀಸರು 360 ಕೆ.ಜಿ. ಕಾಂಡೋಮ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಅವುಗಳನ್ನು ಗೋದಾಮಿನ ಸಮೀಪವಿರುವ ಹೋಟೆಲ್‍ಗಳು ಮತ್ತು ಮಾರುಕಟ್ಟೆ ಮಳಿಗೆಗಳಿಗೆ ಸರಬರಾಜು ಮಾಡಲಾಗುತ್ತಿದೆ ಎಂದು ಸ್ಥಳೀಯ ವರದಿಗಳು ಹೇಳಿವೆ.