ಚಿಕ್ಕಬಳ್ಳಾಪುರ: ಸಂಪ್ ನಿರ್ಮಾಣದ ವೇಳೆ ಗೋಡೆ ಕುಸಿದು ಮಹಿಳೆ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ತೌಡನಹಳ್ಳಿ-ತಿಮ್ಮನಹಳ್ಳಿ ಮಾರ್ಗ ಮಧ್ಯೆ ನಡೆದಿದೆ.
ರೈತ ರಘು ಎಂಬವರ ಜಮೀನಿನಲ್ಲಿ ಅಂಡರ್ ಗ್ರೌಂಡ್ ನೀರಿನ ಶೇಖರಣಾ ತೊಟ್ಟಿ ನಿರ್ಮಾಣದ ವೇಳೆ ಅವಘಡ ಸಂಭವಿಸಿದೆ. ಸಿಮೆಂಟ್ ಇಟ್ಟಿಗೆಗಳಿಂದ ತೊಟ್ಟಿ ನಿರ್ಮಾಣ ಮಾಡಲಾಗುತ್ತಿತ್ತು. ನಿರ್ಮಾಣ ಮಾಡಿದ ಗೋಡೆಯ ಗ್ಯಾಪ್‍ಗೆ ಮಣ್ಣು ತುಂಬಿಸಲು ಮುಂದಾಗಿದ್ದಾರೆ. ಈ ವೇಳೆ ಏಕಾಏಕಿ ಗೋಡೆ ಕಾರ್ಮಿಕರ ಮೇಲೆ ಕುಸಿದುಬಿದ್ದಿದೆ.
ಇದರ ಪರಿಣಾಮ 55 ವರ್ಷದ ಲಕ್ಷ್ಮಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕುಸಿದು ಮಣ್ಣು ಇಟ್ಟಿಗೆಗಳನ್ನು ತೆಗೆದು ಉಳಿದ ಮೂವರು ಕಾರ್ಮಿಕರ ಪ್ರಾಣ ಉಳಿಸಲಾಗಿದ್ದು, ಅವರೆಲ್ಲರಿಗೂ ಸಣ್ಣ ಪುಟ್ಟ ಗಾಯಗಳಾಗಿದೆ.
ಸದ್ಯ ಗಾಯಾಳುಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ನಂದಿ ಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.