– ಹೋಗಬೇಡಿ ಅಂದ್ರು ಹೋದ್ರು
ಕಾರವಾರ: ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ನೀರುಪಾಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮುಖ್ಯ ಕಡಲತೀರದ ಕರಿಯಪ್ಪನ ಕಟ್ಟೆ ತೀರ ಪ್ರದೇಶದಲ್ಲಿ ನಡೆದಿದೆ.
ಮೈಸೂರಿನ ಸುಹಾಸ್(17) ಹಾಗೂ ಈತನೊಂದಿಗಿದ್ದ ಮಂಡ್ಯ ಮೂಲದ ಉಲ್ಲಾಸ್ (15) ಸಮುದ್ರದಲ್ಲಿ ಕಾಣಿಯಾದ ಬಾಲಕರಾಗಿದ್ದಾರೆ. ಒಟ್ಟು 8 ಜನರ ತಂಡ ಮೈಸೂರಿನಿಂದ ಪ್ರವಾಸಕ್ಕೆ ಬಂದಿತ್ತು. ಈ ವೇಳೆ ಖಾಸಗಿ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದ ಇವರು, ಇಂದು ಮುಂಜಾನೆ ಸಮುದ್ರಕ್ಕಿಳಿದಿದ್ದರು. ಅಮವಾಸ್ಯೆಯಾದ್ದರಿಂದ ಸಮುದ್ರದಲ್ಲಿ ಸೆಳತ ಹೆಚ್ಚಿರುತ್ತದೆ ಹೀಗಾಗಿ ಸಮುದ್ರದಲ್ಲಿ ಇಳಿಯಬೇಡಿ ಎಂದು ಎಚ್ಚರಿಸಲಾಗಿತ್ತು.
ಸ್ಥಳೀಯರ ಮಾತಿಗೆ ಬೆಲೆ ಕೊಡದೆ ಬಾಲಕರು ಸಮುದ್ರಕ್ಕಿಳಿದಿದ್ದು, ಈ ವೇಳೆ ಸಮುದ್ರದಲ್ಲಿ ಅಲೆಗಳ ಅಬ್ಬರ ಹಾಗೂ ಸೆಳೆತ ಹೆಚ್ಚಿದ್ದರಿಂದ ಇಬ್ಬರು ಕೊಚ್ಚಿಹೋಗಿದ್ದಾರೆ. ರಕ್ಷಣೆ ಮಾಡುವ ಪ್ರಯತ್ನ ಮಾಡಿದರೂ ಯುವಕ ಸುಹಾಸ್ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯೆ ಸಾವು ಕಂಡಿದ್ದಾನೆ. ಇನ್ನೋರ್ವ ಬಾಲಕ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದು, ಈತನ ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಘಟನೆ ಸಂಬಂಧ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.