ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪುರಾಣ ಪ್ರಸಿದ್ಧ ಮಹಾಬಲೇಶ್ವರ ಆತ್ಮಲಿಂಗ ದರ್ಶನಕ್ಕೆ ನಾಳೆಯಿಂದ ಭಕ್ತರಿಗೆ ಎಲ್ಲ ಪ್ರಕಾರದ ಸೇವೆಗಳು ಪ್ರಾರಂಭವಾಗಲಿವೆ. ಕಳೆದ ಮಾರ್ಚ್ ನಲ್ಲಿ ಕೊರೊನಾ ಆತಂಕ ಹೆಚ್ಚಾದ ಹಿನ್ನೆಲೆ ಮಂದಿರದಲ್ಲಿ ನಿತ್ಯ ಕಾರ್ಯಗಳ ಹೊರತಾಗಿ ಉಳಿದೆಲ್ಲ ಸೇವೆಗಳನ್ನು ರದ್ದು ಪಡಿಸಿ ಭಕ್ತರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.
ಕಳೆದ ಒಂದು ತಿಂಗಳಿಂದ ಸರ್ಕಾರದ ಮಾರ್ಗಸೂಚಿಯಂತೆ ಮಾಸ್ಕ್ ಹಾಕಿದ ಭಕ್ತರಿಗೆ ನಂದಿ ಮಂಟಪದವರೆಗೆ ಬಂದು ಆತ್ಮಲಿಂಗ ದರ್ಶನ ಮಾಡಲು ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಸೇವೆ ಆರಂಭದ ಹಿನ್ನೆಲೆ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಂದಿರದಲ್ಲಿ ಈಗಾಗಲೇ ಮಾಡಿಕೊಳ್ಳಲಾಗಿದೆ. ಸ್ಥಳೀಯ ಉಪಾಧಿವಂತರಿಂದ ಪೂಜೆ ಮಾಡಿಸುವ ವೇಳೆ ಪರಸ್ಪರ ಅಂತರ ಕಾಯ್ದುಕೊಳ್ಳಲು ಸಂಕಲ್ಪ ಮಾಡಿಸುವ ಸ್ಥಳದಲ್ಲಿ ಮತ್ತು ಆತ್ಮಲಿಂಗಕ್ಕೆ ಪೂಜೆಗೆ ಹೋಗುವ ವೇಳೆ ಸರತಿ ಸಾಲಿನಲ್ಲಿ ಪ್ರತ್ಯೇಕವಾದ ಮಾರ್ಕ್ ಹಾಕಲಾಗಿದೆ.
ಸರ್ಕಾರಿ ನಿಯಮದಂತೆ ನಿರ್ದಿಷ್ಟ ಸಂಖ್ಯೆಯ ಭಕ್ತರನ್ನು ಮಾತ್ರ ಒಮ್ಮೆ ಮಂದಿರದ ನಂದಿ ಮಂಟಪ ಮತ್ತು ಗರ್ಭಗುಡಿಗೆ ಬಿಡಲಾಗುವುದು. ಉಳಿದವರು ಮಂದಿರದ ಹೊರ ಪ್ರಾಂಗಣದಲ್ಲಿ ಇರಲು ವ್ಯವಸ್ಥೆ ಮಾಡಲಾಗಿದೆ. ಇದೇ ರೀತಿ ಗರ್ಭಗುಡಿಯಲ್ಲಿಯೂ ಪರಸ್ಪರ ಅಂತರ ನಿರ್ವಹಣೆಗೆ ಆದ್ಯತೆ ನೀಡಲಾಗಿದೆ ಎಂದು ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಜಿ.ಕೆ ಹೆಗಡೆ ಮಾಹಿತಿ ನೀಡಿದ್ದಾರೆ.
ವಸ್ತ್ರ ಸಂಹಿತೆ ಕಡ್ಡಾಯ: ದೇವರ ದರ್ಶನಕ್ಕೆ ಬರುವ ಭಕ್ತರಿಗೆ ವಸ್ತ್ರ ಸಂಹಿತೆಯನ್ನು ಕಡ್ಡಾಯಗೊಳಿಸಲಾಗಿದೆ. ಈ ಹಿಂದೆ ವಸ್ತ್ರ ಸಂಹಿತೆ ಕಡ್ಡಾಯವಾಗಿದ್ದರೂ ಪುರುಷರಿಗೆ ಪ್ಯಾಂಟ್ ಧರಿಸಲು ಅವಕಾಶ ಕಲ್ಪಿಸಲಾಗಿತ್ತು. ಈ ಬಾರಿ ಪುರುಷರು ಲುಂಗಿ, ದೋತಿ ಹಾಗೂ ಮಹಿಳೆಯರು ಸೀರೆ ಹಾಗೂ ಚೂಡಿ ಮಾತ್ರ ಧರಿಸಿ ಗರ್ಭಗುಡಿ ಪ್ರವೇಶ ಮಾಡಬಹುದಾಗಿದೆ.
ಒಂದು ವೇಳೆ ಸ್ತ್ರೀಯರು ಪ್ಯಾಂಟ್/ಜೀನ್ಸ್ ಧರಿಸಿದರೆ ಅಥವಾ ಶರ್ಟ ಧರಿಸಿ ಬಂದಲ್ಲಿ ಹಾಗೂ ಪುರುಷರು ಲುಂಗಿ ಅಥವಾ ಪಂಚೆ ಧರಿಸದಿದ್ದರೆ ಅಂತವರಿಗೆ ಆತ್ಮ ಲಿಂಗ ದರ್ಶನಕ್ಕೆ ಅನುಮತಿ ಇರುವುದಿಲ್ಲ. ಇದಲ್ಲದೇ ದೇವಸ್ಥಾನದ ಒಳಗೆ ಆಂತರಿಕ ನಿರ್ಭಂಧಗಳನ್ನು ಸಹ ಹಾಕಲಾಗಿದ್ದು, ಸದ್ಯ ಈಶ್ವರನ ಭಕ್ತರಿಗೆ ನಾಳೆಯಿಂದ ಆತ್ಮಲಿಂಗ ದರ್ಶನ ಭಾಗ್ಯ ದೊರೆಯಲಿದೆ.