ಕಾರವಾರ: ಕೊರೊನಾ ಲಾಕ್‍ಡೌನ್ ಹಾಗೂ ವೈರಸ್‍ನ ಹರಡುವಿಕೆಯ ಭಯದಿಂದಾಗಿ ಕ್ರಿಕೆಟ್ ಸೇರಿದಂತೆ ಹಲವು ಕ್ರೀಡಾಕೂಟಗಳು ರದ್ದಾಗಿವೆ. ಜನ ಕೂಡ ಮನೆಗಳಿಂದ ಅನಾವಶ್ಯಕವಾಗಿ ಹೊರ ಬರುವುದನ್ನು ಕಡಿಮೆ ಮಾಡಿದ್ದಾರೆ. ಈ ನಡುವೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹಂಚಿಕೊಂಡಿರುವ ಫೋಟೋವೊಂದು ಉತ್ತರ ಕನ್ನಡಿಗರ ಮನ ಗೆದ್ದಿದೆ.
ಹೌದು, ಲಾಕ್‍ಡೌನ್ ನಿಂದಾಗಿ ಎಲ್ಲವೂ ಸ್ತಬ್ಧಗೊಂಡಿದೆ. ಕೆಲವರು ಮನೆಯಲ್ಲೇ ಒಳಾಂಗಣ ಕ್ರೀಡೆಗಳಲ್ಲಿ ತೊಡಗಿಕೊಂಡು ಟೈಮ್ ಪಾಸ್ ಮಾಡಿದರೆ, ಇನ್ನು ಕೆಲವರು ಸಾಮಾಜಿಕ ಅಂತರ ಕಾಯ್ದುಕೊಂಡು ಇತ್ತೀಚೆಗೆ ಹೊರಾಂಗಣ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.
https://www.facebook.com/icc/photos/a.163728620312909/3481082031910868
ಮಾರ್ಚ್ 28ರಿಂದ ಆರಂಭವಾಗಬೇಕಿದ್ದ ಐಪಿಎಲ್ ಕೂಡ ಆರಂಭವಾಗದೇ ಕ್ರಿಕೆಟ್ ಪ್ರಿಯರಿಗೆ ಬೇಸರ ಮೂಡಿಸಿದೆ. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಏಪ್ರಿಲ್ 15ರವರೆಗೆ ಈ ಹಿಂದೆ ಐಪಿಎಲ್ ಅನ್ನು ಮುಂದೂಡಲಾಗಿತ್ತು. ಆದರೆ ಏಪ್ರಿಲ್‍ನಲ್ಲೂ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಬರದಿದ್ದ ಕಾರಣ ಅನಿರ್ದಿಷ್ಟಾವಧಿಗೆ ಟೂರ್ನಿಯನ್ನು ರದ್ದು ಮಾಡುವುದಾಗಿ ಬಿಸಿಸಿಐ ಘೋಷಿಸಿದ್ದು ಹಲವರಿಗೆ ಬೇಸರ ಮೂಡಿಸಿದೆ. ಇದನ್ನು ಓದಿ: ಕಾರವಾರದಲ್ಲಿ ತಲೆ ಎತ್ತಲಿದೆ ಅಂತಾರಾಷ್ಟ್ರೀಯ ಕ್ರೀಡಾಂಗಣ – ಉ.ಕದಲ್ಲೇ ಏಕೆ?
ಈ ನಡುವೆ ಇಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತನ್ನ ಫೇಸ್‍ಬುಕ್ ಖಾತೆಯಲ್ಲಿ ಗೋಕರ್ಣದ ಫೋಟೋವನ್ನು ಹಂಚಿಕೊಂಡಿದೆ. ಬಾಂಗ್ಲಾದೇಶ ಮೂಲದ, ಬೆಂಗಳೂರಿನಲ್ಲಿ ಉದ್ಯೋಗದ ನಿಮಿತ್ತ ನೆಲೆಸಿರುವ ಪೊರಗ್ ಸರ್ಕೆರ್ ಎಂಬ ಹವ್ಯಾಸಿ ಫೋಟೋಗ್ರಾಫರ್ ಕ್ಲಿಕ್ಕಿಸಿರುವ ಫೋಟೋವೊಂದನ್ನು ಐಸಿಸಿ ತನ್ನ ಫೇಸ್‍ಬುಕ್ ಪುಟದಲ್ಲಿ ಹಂಚಿಕೊಂಡಿದೆ. ಈ ಫೋಟೋದಲ್ಲಿ ಗೋಕರ್ಣದ ಕಡಲತೀರದಲ್ಲಿ ಒಂದಷ್ಟು ಯುವಕರು ಕ್ರಿಕೆಟ್ ಆಡುತ್ತಿರುವುದು ಸೆರೆಯಾಗಿದೆ.