ಗೋಕರ್ಣ: ಗ್ರಹಣಕಾಲದಲ್ಲಿ ಸಮುದ್ರದಲ್ಲಿ ಮಿಂದೆದ್ದ ಮಹಾಬಲೇಶ್ವರ ಭಕ್ತರು

Public TV
2 Min Read
Gokarna Sea Bathing 1

ಕಾರವಾರ: ಖಂಡಗ್ರಾಸ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಮುಖ್ಯ ಕಡಲತೀರದಲ್ಲಿ ಸ್ಥಳೀಯ ಜನರು ಹಾಗೂ ಯಾತ್ರಿಕರು ಸಮುದ್ರ ಸ್ನಾನ ಮಾಡಿ ಗ್ರಹಣ ದೋಷ ನಿವಾರಣೆಗಾಗಿ ಜಪತಪ ಕೈಗೊಂಡರು.

ಗ್ರಹಣ ಪ್ರಾರಂಭವಾಗುತ್ತಿದ್ದಂತೆ ಗೋಕರ್ಣದ ಕಡಲತೀರಕ್ಕೆ ಆಗಮಿಸಿದ ಜನರು ಮೊದಲು ಪವಿತ್ರ ಸಮುದ್ರ ಸ್ನಾನ ನೆರವೇರಿಸಿದರು. ನಂತರ ಕಡಲತೀರದ ಮರಳಿನಲ್ಲಿ ಲಿಂಗವನ್ನು ಸೃಷ್ಟಿಸಿ ಪೂಜೆ ನೆರವೇರಿಸಿ ಗ್ರಹಣ ಮುಗಿಯುವವರೆಗೂ ಮಹಾಬಲೇಶ್ವರನ ಧ್ಯಾನದಲ್ಲಿ ನಿರತರಾಗಿ ನಂತರ ಗೋಕರ್ಣದ ಮಹಾಬಲೇಶ್ವರನ ದರ್ಶನ ನೆರವೇರಿಸಿದರು.

Gokarna Sea Bathing 3

ಸಮುದ್ರ ಸ್ನಾನ-ಆರೋಗ್ಯಕ್ಕೂ ಹಿತ: ಹಲವು ನದಿಗಳು ಸೇರುವ ಅರಬ್ಬಿ ಸಮುದ್ರದ ಗೋಕರ್ಣ ಕಡಲತೀರವು ಮಹೇಶ್ವರನ ಆತ್ಮಲಿಂಗ ನೆಲೆಯೂರಿದ ಸ್ಥಳವಾಗಿದೆ. ಧಾರ್ಮಿಕ ಕಾರಣದಿಂದ ಗೋಕರ್ಣ ವಿಶೇಷ ಸ್ಥಾನ ಪಡೆದಿದ್ದು, ಇಲ್ಲಿನ ಸಮುದ್ರವೂ ವಿಶೇಷ ಪ್ರಾಮುಖ್ಯತೆ ಹೊಂದಿದೆ. ಸಮುದ್ರಕ್ಕೆ ಹಲವು ನದಿಗಳು ಸೇರುವುದರಿಂದ ಸಮುದ್ರಕ್ಕೆ ಮಹಾ ಗಂಗಾ ಎಂದು ಹೇಳಲಾಗುತ್ತದೆ. ಹಲವು ರೋಗ ರುಜನೆಗಳನ್ನು ಪರಿಹರಿಸುವ ಶಕ್ತಿ ಈ ಸಮುದ್ರಕ್ಕಿದೆ ಎಂಬ ನಂಬಿಕೆಯಾಗಿದ್ದು, ನಮ್ಮ ದೇಹದ ನೆಗೆಟಿವ್ ಎನರ್ಜಿಯನ್ನು ತೆಗೆದುಹಾಕುತ್ತದೆ ಎಂಬ ನಂಬಿಕೆ.

ಗ್ರಹಣ ಸಮಯದಲ್ಲಿ ಸಮುದ್ರ ಹಾಗೂ ನದಿ ಸ್ನಾನ ಮಾಡುವ ಸಂಪ್ರದಾಯವಿದೆ. ಸಮುದ್ರದ ನೀರು ಉಪ್ಪಾಗಿರುವ ಕಾರಣದಿಂದ ಅದು ಚರ್ಮ ರೋಗಗಳನ್ನು ನಿವಾರಣೆ ಮಾಡಿ ದೇಹಕ್ಕೆ ಒಳ್ಳೆಯದನ್ನು ಮಾಡಲಿದೆ ಎನ್ನುತ್ತೆ ವಿಜ್ಞಾನ. ನಮ್ಮ ಪೂರ್ವಜರು ಹಿಂದಿನಿಂದಲೂ ಈ ರೀತಿಯ ಸ್ನಾನದ ಆಚರಣೆಗಳನ್ನು ಮಾಡಿಕೊಂಡು ಬಂದಿದ್ದಾರೆ. ಸಮುದ್ರ ಸ್ನಾನ ಮಾಡುವುದರಿಂದ ನೀರಿನ ತೇಜದಾಯಕ ಸ್ಪರ್ಶದಿಂದ ದೇಹದಲ್ಲಿನ ಚೇತನವೂ ಜಾಗೃತವಾಗಿ ಅದು ದೇಹದ ಟೊಳ್ಳುಗಳಲ್ಲಿ ಸಂಗ್ರಹವಾಗಿರುವ ಮತ್ತು ಘನೀಕೃತವಾಗಿರುವ ರಜ-ತಮಾತ್ಮಕ ಲಹರಿಗಳನ್ನು ಜಾಗೃತಗೊಳಿಸಿ ಹೊರಗೆ ತಳ್ಳುತ್ತದೆ.

Gokarna Sea Bathing 4

ಸಮುದ್ರದಲ್ಲಿ ಸ್ನಾನ ಮಾಡುವುದಕ್ಕಿಂತ ಮೊದಲು ಜನರು ಜಲದೇವತೆಯನ್ನು ಪ್ರಾರ್ಥಿಸಿ ಸೂರ್ಯನಮಸ್ಕಾರ ಹಾಗೂ ಅರ್ಗೆಯನ್ನು ಕೊಟ್ಟು ಪೂಜಿಸುತ್ತಾರೆ. ನಂತರ ನಾಮಜಪ ಮಾಡುತ್ತಾ ಅಥವಾ ಶ್ಲೋಕವನ್ನು ಹೇಳುತ್ತಾ ಸೂರ್ಯನಿಗೆ ಮುಖ ಮಾಡಿ ಗ್ರಹಣ ಕಳೆಯುವವರೆಗೂ ಇಷ್ಟ ದೇವರ ಜಪ ಮಾಡಲಾಗುತ್ತದೆ. ಹೀಗೆ ಮಾಡುವ ಮೂಲಕ ದೇಹದ ನೆಗಟಿವ್ ಎನರ್ಜಿಯನ್ನು ಹೊರಹಾಕಿ ಮನಸ್ಸು ಶುಭ್ರತೆಯಡೆ ತಿರುಗುತ್ತದೆ ಎಂಬುದು ನಂಬಿಕೆ ಇದ್ದು, ಇಂದು ನೂರಾರು ಜನರು ಸಮುದ್ರ ಸ್ನಾನ ಮಾಡಿ ಗೋಕರ್ಣದ ಮಹಾಬಲೇಶ್ವರನ ಪೂಜೆ ಗೈದು ಗ್ರಹಣ ದೋಷ ಪರಿಹಾರಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.

Gokarna Sea Bathing 2

Share This Article
Leave a Comment

Leave a Reply

Your email address will not be published. Required fields are marked *