– ಮೊಬೈಲ್ ಕಿತ್ತುಕೊಂಡು ಸಿಕ್ಕಿಬಿದ್ದ ಆರೋಪಿಗಳು
ನವದೆಹಲಿ: ರಾಷ್ಟ್ರ ರಾಜಧಾನಿಯ ಆಲಿ ವಿಹಾರ್ ಪ್ರದೇಶದಲ್ಲಿ 25 ವರ್ಷದ ಯುವಕನನ್ನು ದರೋಡೆ ಮಾಡಿ ಚಾಕುವಿನಿಂದ ಇರಿದು ಕೊಲೆ ಮಾಡಿದ ಆರೋಪದ ಮೇಲೆ ದೆಹಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಸುಮಿತ್ ಡಬ್ಬಾ (20) ಮತ್ತು ಕಾರ್ತಿಕ್ (24) ಎಂದು ಗುರುತಿಸಲಾಗಿದೆ. ಈ ಇಬ್ಬರು ಆರೋಪಿಗಳು ಸೇರಿಕೊಂಡು ಅಟೋಮೊಬೈಲ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಸನ್ನಿ ದಯಾಲ್‍ನನ್ನು ಕಾಡಿನೊಳಗೆ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಆತನ ಮೊಬೈಲ್ ಕಿತ್ತುಕೊಂಡು ಮೃತದೇಹವನ್ನು ಅಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾರೆ.
ಆರೋಪಿಗಳಲ್ಲಿ ಓರ್ವನಾದ ಸುಮಿತ್ ಡಬ್ಬಾ ಗ್ಲುಯೆಡ್ ಎಂಬ ಸಲಿಂಗಕಾಮಿ ಡೇಟಿಂಗ್ ಆ್ಯಪ್‍ನಲ್ಲಿ ಸನ್ನಿ ದಯಾಲ್‍ನನ್ನು ಪರಿಚಯ ಮಾಡಿಕೊಂಡಿದ್ದಾನೆ. ಜೊತೆಗೆ ಹಲವು ದಿನಗಳಿಂದ ಆತನ ಜೊತೆ ಚಾಟಿಂಗ್ ಮಾಡಿದ್ದಾನೆ. ಪರಿಚಯವಾಗಿ ಬಹಳ ದಿನದ ನಂತರ ನವದೆಹಲಿಯ ಆಲಿ ವಿಹಾರ್ ಪ್ರದೇಶಲ್ಲಿರುವ ಕಾಡಿನೊಳಗೆ ಭೇಟಿಯಾಗೋಣ, ಅಲ್ಲಿ ರೊಮ್ಯಾನ್ಸ್ ಮಾಡೋಣ ಎಂದು ಸನ್ನಿಯನ್ನು ಅಲ್ಲಿಗೆ ಕರೆಸಿಕೊಂಡು ಕೊಲೆ ಮಾಡಿದ್ದಾರೆ.
ಕಾಡಿನೊಳಗೆ ಮೃತದೇಹ ದೊರೆತ ನಂತರ ದೂರು ದಾಖಲಿಸಿಕೊಂಡ ಪೊಲೀಸರು, ಮೊದಲು ಮೃತನ ಮೊಬೈಲ್ ಅನ್ನು ಹುಡುಕಿದ್ದಾರೆ. ಆದರೆ ಆತನ ಮೊಬೈಲ್ ಮಿಸ್ ಆಗಿದೆ ಎಂದು ತಿಳಿದು ಬಂದಿದೆ. ಈ ವೇಳೆ ಅದನ್ನು ಟ್ರ್ಯಾಕ್ ಮಾಡಿದಾಗ, ಆ ಮೊಬೈಲ್ ಅನ್ನು ಗೌತಂಪುರಿ ನಿವಾಸಿ ಪಂಕಜ್ ಬಳಸುತ್ತಿರುವುದು ತಿಳಿದು ಬಂದಿದೆ. ಆತನನ್ನು ಅರೆಸ್ಟ್ ಮಾಡಿ ಠಾಣೆಗೆ ಕರೆತಂದು ವಿಚಾರಣೆ ಮಾಡಿದಾಗ, ಈ ಮೊಬೈಲ್ ಸುಮಿತ್ ಡಬ್ಬಾ ಮಾರಿದ್ದು ಎಂದು ತಿಳಿದು ಬಂದಿದೆ.
ಪಂಕಜ್ ಮಾಹಿತಿ ಆಧರಿಸಿ ಸುಮಿತ್ ಡಬ್ಬಾನ್ನನು ಪೊಲೀಸರು ಅರೆಸ್ಟ್ ಮಾಡಿ ಠಾಣೆಗೆ ಕರೆತಂದಾಗ, ನಾನು ಮತ್ತು ನನ್ನ ಸ್ನೇಹಿತ ಕಾರ್ತಿಕ್ ಸೇರಿ ಆತನನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಆತನ್ನು ಗೇ ಆ್ಯಪ್‍ನಲ್ಲಿ ಪರಿಚಯ ಮಾಡಿಕೊಂಡು ಕಾಡಿಗೆ ಬರುವಂತೆ ಮಾಡಿದವು. ಕಾಡಿಗೆ ಬಂದ ಆತನ ಮೊಬೈಲ್ ಕಸಿದುಕೊಂಡು ಎಸ್ಕೇಪ್ ಆಗಲು ಪ್ರಯತ್ನಿಸಿದಾಗ ಆತ ವಿರೋಧ ಮಾಡಿದ. ಈ ಕಾರಣಕ್ಕೆ ಅವನನ್ನು ಕೊಲೆ ಮಾಡಿದ್ದೇವೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.