– ಅಮ್ಮ, ಅಕ್ಕನಿಗೆ ಆಸರೆಯಾಗಿದ್ದ ಯುವಕ
ಚಿಕ್ಕಮಗಳೂರು: ಬೆಂಗಳೂರಿನಿಂದ ಬಂದಿದ್ದ ಸ್ನೇಹಿತರ ಜೊತೆ ಈಜಲು ಹೋದ ಯುವಕ ನೀರು ಪಾಲಾಗಿದ್ದಾನೆ. ಆದರೆ ಯುವಕ ನೀರಿನಲ್ಲಿ ಮುಳುಗುತ್ತಿದ್ದಂತೆ ಸ್ನೇಹಿತರು ಆತನ ಮೊಬೈಲ್ ತೆಗೆದುಕೊಂಡು ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಆಲ್ದೂರಿನ ಗ್ರಾಮದಲ್ಲಿ ನಡೆದಿದೆ.
ಅನ್ವಿತ್ (18) ಮೃತ ಯುವಕ. ತಂದೆಯನ್ನ ಕಳೆದುಕೊಂಡಿದ್ದ ಅನ್ವಿತ್ ಅಮ್ಮ-ಅಕ್ಕನಿಗೆ ಆಸರೆಯಾಗಿದ್ದನು. ಅಕ್ಕನನ್ನು ಈತನೇ ಓದಿಸುತ್ತಿದ್ದು, ಬೆಂಗಳೂರಲ್ಲಿ ಬೇಕರಿ ಕೆಲಸ ಮಾಡಿಕೊಂಡಿದ್ದನು. ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಊರಿಗೆ ಬಂದಿದ್ದ ಅನ್ವಿತ್ ಮತ್ತೆ ಬೆಂಗಳೂರಿಗೆ ಹೋಗಿರಲಿಲ್ಲ. ನಂತರ ಊರಿನಲ್ಲೇ ಓಮ್ನಿ ಕಾರನ್ನ ಬಾಡಿಗೆ ಇಟ್ಟುಕೊಂಡಿದ್ದನು. ಜೊತೆಗೆ ಕುಡಿಯುವ ನೀರಿನ ಕ್ಯಾನ್ ಬ್ಯುಸಿನೆಸ್ ಮಾಡುತ್ತಿದ್ದನು.
Advertisement
Advertisement
ಐದು ದಿನದ ಹಿಂದೆ ಬೆಂಗಳೂರಿನಿಂದ ಸ್ವಿಫ್ಟ್ ಕಾರಿನಲ್ಲಿ ಬಂದ ಮೂವರು, ಪಾರ್ಟಿ ಮಾಡೋ ನೆಪದಲ್ಲಿ ಆಲ್ದೂರು ಸಮೀಪದ ನದಿಗೆ ಕರೆದುಕೊಂಡು ಹೋಗಿದ್ದರು. ಆದರೆ ಸ್ನೇಹಿತರು ನಾಪತ್ತೆಯಾಗಿದ್ದು, ನದಿಯಲ್ಲಿ ಅನ್ವಿತ್ ಶವವಾಗಿ ಪತ್ತೆಯಾಗಿದ್ದಾನೆ. ಅನ್ವಿತ್‍ಗೆ ಈಜಲು ಬರುತ್ತಿರಲಿಲ್ಲ. ಆತ ನೀರಿಗೆ ಇಳಿದಿಲ್ಲ, ಬೆಂಗಳೂರಿನಿಂದ ಬಂದವರು ಕೊಲೆ ಮಾಡಿದ್ದಾರೆ ಎಂದು ಮೃತನ ತಾಯಿ ಆರೋಪಿಸಿದ್ದಾರೆ.
Advertisement
Advertisement
ಅನ್ವಿತ್ ಸ್ನೇಹಿತರು ಆತ ನೀರಿನಲ್ಲಿ ಮುಳುಗುತ್ತಿದ್ದಂತೆ ಅಲ್ಲಿಂದ ಪರಾರಿಯಾಗಿದ್ದಾರೆ. ಇದುವರೆಗೂ ಫೋನ್ ಆನ್ ಆಗಿದೆ. ಕಾಲ್ ಮಾಡಿದರೆ ರಿಸೀವ್ ಮಾಡುತ್ತಾರೆ. ಆದರೆ ಯಾರೂ ಮಾತನಾಡುವುದಿಲ್ಲ. ಅನ್ವಿತ್ ಬೆಂಗಳೂರಲ್ಲಿ ಕೆಲಸ ಮಾಡುವಾಗ ಇದ್ದ ಸ್ನೇಹಿತರು ಊರಿಗೆ ಬರೋದಾಗಿ ಹಿಂದಿನ ದಿನವೇ ತಿಳಿಸಿದ್ದರು. ಅದರಂತೆಯೇ ಸ್ವಿಫ್ಟ್ ಕಾರಲ್ಲಿ ಬಂದಿರೋದು, ಪೆಟ್ರೋಲ್ ಬಂಕ್‍ನಲ್ಲಿ ಪೆಟ್ರೋಲ್ ಹಾಕಿಸಿರುವುದು, ಬಾರ್‌ಗೆ ಹೋಗಿ ಎಣ್ಣೆ ಖರೀದಿಸಿರೋದು ಎಲ್ಲದರ ಸಿಸಿಟಿವಿ ದೃಶ್ಯ ಕೂಡ ಇದೆ. ನಾನು ಸ್ನೇಹಿತರ ಜೊತೆ ಹೋಗುತ್ತೀನಿ ಅಂತ ಅನ್ವಿತ್ ತಾಯಿಗೆ ಫೋನ್ ಮಾಡಿ ಹೋಗಿದ್ದನು.
ಇದೇ ವೇಳೆ ಸ್ಥಳೀಯ ಇಬ್ಬರು ಹುಡುಗರು ಕೂಡ ಬೆಂಗಳೂರಿಂದ ಬಂದ ಹುಡುಗರಿಗೆ ಸಾಥ್ ನೀಡಿದ್ದಾರೆ. ಈಜಲು ಹೋಗಿ ಸಾವನ್ನಪ್ಪಿದ್ದಾನೆ ಅಂತ ಸುದ್ದಿ ಹಬ್ಬಿಸಿ ಎಲ್ಲರೂ ಅಲ್ಲಿಂದ ಪರಾರಿಯಾಗಿದ್ದಾರೆ. ಆದರೆ ಅನ್ವಿತ್ ಕುತ್ತಿಗೆಯಲ್ಲಿ ಗಾಯದ ಗುರುತುಗಳಿದ್ದು, ಇದು ಆಕಸ್ಮಿಕ ಸಾವಲ್ಲ, ಬದಲಾಗಿ ಕೊಲೆ ಅನ್ನೋ ಸಂಶಯ ಮೂಡಿಸಿದೆ. ಅಷ್ಟೇ ಅಲ್ಲದೇ ಅನ್ವಿತ್ ನದಿಗೆ ಬಿದ್ದರೂ ನೀರು ಕುಡಿದಿರಲಿಲ್ಲ. ಮೂಗು-ಬಾಯಲ್ಲಿ ನೊರೆ ಬಂದಿದೆ. ಇದೆಲ್ಲಾ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಎಸ್‍ಪಿ ಅಕ್ಷಯ್ ಹೇಳಿದ್ದಾರೆ.
ಮೃತನ ತಾಯಿ ಆಲ್ದೂರು ಠಾಣೆಗೆ ದೂರು ಕೊಡಲು ಹೋದರೆ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ. ಅದು ಬೆಂಗಳೂರು, ಅಷ್ಟು ದೊಡ್ಡ ಊರಲ್ಲಿ ಯಾರು? ಎಲ್ಲಿ? ಅಂತ ಹುಡುಕೋದು. ಸಿಕ್ಕಾಗ ಹೇಳುತ್ತೀವಿ ಬನ್ನಿ ಎಂದು ಹೇಳಿದ್ದಾರೆ. ಸಿಸಿಟಿವಿ ದೃಶ್ಯ, ಸ್ವಿಫ್ಟ್ ಕಾರಿನ ನಂಬರ್ ಕೊಟ್ಟರೂ ಪೊಲೀಸರು ತನಿಖೆ ಮಾಡುತ್ತಿಲ್ಲ ಎಂದು ಸಂಬಂಧಿಕರು ಪೊಲೀಸರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರ ಎಸ್‍ಪಿ ಗಮನಕ್ಕೆ ಬಂದಿದ್ದು ಸೂಕ್ತ ತನಿಖೆ ನಡೆಸುವಂತೆ ಆಲ್ದೂರು ಪೊಲೀಸರಿಗೆ ಸೂಚಿಸಿದ್ದಾರೆ.