– ವಾಕ್ ಮಾಡ್ತಿದ್ದಾಗ ನದಿಗೆ ಬಿದ್ದ ಸ್ನೇಹಿತ
– ರಷ್ಯಾದಿಂದ ಬಂದ ವಿದ್ಯಾರ್ಥಿಗಳ ಮೃತದೇಹ
ಚೆನ್ನೈ: ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳು ರಷ್ಯಾದ ನದಿಯೊಂದರಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಇದೀಗ ನಾಲ್ವರ ಮೃತದೇಹಗಳನ್ನು ಶುಕ್ರವಾರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ನಾಲ್ವರು ವಿದ್ಯಾರ್ಥಿಗಳು ತಮಿಳುನಾಡಿನವರಾಗಿದ್ದು, ಆಗಸ್ಟ್ 8 ರಂದು ರಷ್ಯಾದ ವೋಲ್ಗಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದರು.
ಶುಕ್ರವಾರ ಮೃತದೇಹಗಳನ್ನು ಕಾರ್ಗೋ ವಿಮಾನದ ಮೂಲಕ ಚೆನ್ನೈಗೆ ಬಂದಿವೆ. ಅವರ ಕುಟುಂಬದವರು ಮೃತದೇಹವನ್ನು ಪಡೆಯಲು ವಿಮಾನ ನಿಲ್ದಾಣದಲ್ಲಿದ್ದರು. ಅಲ್ಲದೇ ವಿಮಾನ ಬಂದಾಗ ಬಿಜೆಪಿ ರಾಜ್ಯ ಅಧ್ಯಕ್ಷ ಎಲ್. ಮುರುಗನ್ ವಿಮಾನ ನಿಲ್ದಾಣದಲ್ಲಿದ್ದರು ಎಂದು ವರದಿಯಾಗಿದೆ.
Advertisement
Advertisement
ಏನಿದು ಪ್ರಕರಣ?
ಆಗಸ್ಟ್ 8 ರಂದು ಮನೋಜ್ ಆನಂದ್ (22), ಆರ್.ವಿಘ್ನೇಶ್ (22), ಆಶಿಕ್ (22) ಮತ್ತು ಸ್ಟೀಫನ್ ಲೆಬಾಕು (20) ಸೇರಿದಂತೆ 11 ವಿದ್ಯಾರ್ಥಿಗಳು ರಷ್ಯಾದ ವೋಲ್ಗಾ ನದಿಯ ಬಳಿ ವಾಕ್ ಮಾಡಲು ಹೋಗಿದ್ದರು. ನಾಲ್ವರಲ್ಲಿ ಓರ್ವ ಕಾಲು ಜಾರಿ ನದಿಗೆ ಬಿದ್ದಿದ್ದಾನೆ. ಮುಳುಗುತ್ತಿರುವ ತಮ್ಮ ಸ್ನೇಹಿತನಿಗೆ ಸಹಾಯ ಮಾಡಲು ಇತರರು ಪ್ರಯತ್ನಿಸಿದ್ದಾರೆ. ಆದರೆ ನಾಲ್ವರು ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಉಳಿದ ವಿದ್ಯಾರ್ಥಿಗಳು ರಷ್ಯಾದ ತುರ್ತು ಸೇವೆಗಳಿಗೆ ಫೋನ್ ಮಾಡಿ ತಿಳಿಸಿದ್ದರು.
Advertisement
Advertisement
ಮುಳುಗಿದ ನಾಲ್ವರು ವಿದ್ಯಾರ್ಥಿಗಳು ರಷ್ಯಾದ ವೋಲ್ಗೊಗ್ರಾಡ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದರು. ಆಶಿಕ್, ಮನೋಜ್ ಮತ್ತು ವಿಘ್ನೇಶ್ ಮೂವರು ಇನ್ನೂ ಕೆಲವು ತಿಂಗಳಲ್ಲಿ ಎಂಡಿ ಪದವಿ ಮುಗಿಸುತ್ತಿದ್ದರು. ಇನ್ನೂ ಸ್ಟೀಫನ್ ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದನು. ಆಶಿಕ್ ತಿರುಪ್ಪೂರು ಜಿಲ್ಲೆಯ ಧರಪುರಂ ಮೂಲದವನಾಗಿದ್ದರೆ, ಮನೋಜ್ ಆನಂದ್ ಸೇಲಂ ಜಿಲ್ಲೆಯ ತಲೈವಾಸಲ್ ಮೂಲದವನು. ವಿಘ್ನೇಶ್ ಕಡಲೂರು ಜಿಲ್ಲೆಯ ತಿಟ್ಟಕ್ಕುಡಿ ಮತ್ತು ಸ್ಟೀಫನ್ ಚೆನ್ನೈ ಮೂಲದವನು ಎಂದು ತಿಳಿದುಬಂದಿದೆ.
ಈ ಹಿಂದೆಯೇ ನಾಲ್ವರು ವಿದ್ಯಾರ್ಥಿಗಳ ಕುಟುಂಬದವರು ಮೃತದೇಹವನ್ನು ತಮ್ಮ ಮನೆಗಳಿಗೆ ತರಲು ಸಹಾಯ ಮಾಡುವಂತೆ ರಾಜ್ಯ ಸರ್ಕಾರವನ್ನು ಕೋರಿದ್ದರು. ನಂತರ ಇದಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದರು. ಅಷ್ಟೇ ಅಲ್ಲದೇ ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಕೂಡ ಕುಟುಂಬದವರನ್ನ ಸಂಪರ್ಕಿಸಿ ಮೃತದೇಹಗಳನ್ನು ತಮಿಳುನಾಡಿಗೆ ಮರಳಿ ತರಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಭರವಸೆ ನೀಡಿದ್ದರು.