ಬೆಂಗಳೂರು: ರಾಜರಾಜೇಶ್ವರಿ ಉಪಚುನಾವಣೆಯಲ್ಲಿ ಮುನಿರತ್ನ ಗೆದ್ದ ತಕ್ಷಣವೇ ಮಂತ್ರಿ ಸ್ಥಾನ ನೀಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ.
ಬಿಜೆಪಿ ಕಚೇರಿ ಭಾವುರಾವ್ ದೇಶಪಾಂಡೆ ಭವನದಿಂದ ವರ್ಚುಯಲ್ ಕಾರ್ಯಕ್ರಮದಲ್ಲಿ ಕ್ಷೇತ್ರದ ಮತದಾರರನ್ನು ಉದ್ದೇಶಿಸಿ ಮಾತನಾಡಿ ಮತಯಾಚಿಸಿದ ಸಿಎಂ, ಯಾವುದೇ ಜಾತಿ ರಾಜಕಾರಣ ಈ ಚುನಾವಣೆಯಲ್ಲಿ ನಡೆಯುವುದಿಲ್ಲ. ಎಲ್ಲ ಜಾತಿಯನ್ನ ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇವೆ. ಒಕ್ಕಲಿಗ ಸಮುದಾಯದ ಸಚಿವರು ನಮ್ಮಲ್ಲಿ ಹೆಚ್ಚಿದ್ದಾರೆ. ಮುನಿರತ್ನ ಕೊರೊನಾ ಸಂದರ್ಭದಲ್ಲಿ ಚೆನ್ನಾಗಿ ಕೆಲಸ ಮಾಡಿದ್ದು ಅವರು 40 ಸಾವಿರಕ್ಕೂ ಹೆಚ್ಚು ಅಂತರದಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Live : ಉಪಚುನಾವಣೆಯ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮತದಾರರೊಂದಿಗೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರ ವರ್ಚುವಲ್ ಸಂವಾದ. https://t.co/W5w9l98lF0
— BJP Karnataka (@BJP4Karnataka) October 31, 2020
ಚುನಾವಣೆ ಮುಗಿದ ಮೇಲೆ ದೆಹಲಿಗೆ ಹೋಗುತ್ತೇನೆ. ಸಂಪುಟ ವಿಸ್ತರಣೆನೋ, ಪುನಾರಚನೆಯೋ ಕಾದು ನೋಡಬೇಕು. ದೆಹಲಿಯ ವರಿಷ್ಠರು ಏನ್ ಹೇಳ್ತಾರೋ ಹಂಗೆ ಕೇಳುತ್ತೇವೆ. ಮುನಿರತ್ನ ಅವರು ಗೆದ್ದ ತಕ್ಷಣ 100ಕ್ಕೆ 100 ಮಂತ್ರಿ ಮಾಡುತ್ತೇವೆ ಎಂದು ಈ ವೇಳೆ ಮೊದಲ ಬಾರಿಗೆ ಬಹಿರಂಗವಾಗಿ ಹೇಳಿಕೆ ನೀಡಿದರು.
ನರೇಂದ್ರ ಮೋದಿ ಪಕ್ಷ ಬಿಜೆಪಿ. ಬಿಜೆಪಿ ಚಿಹ್ನೆ ಕಮಲದ ಗುರುತು, ಮುನಿರತ್ನ ಬಿಜೆಪಿ ಅಭ್ಯರ್ಥಿ. 17 ಶಾಸಕರು ರಾಜೀನಾಮೆ ಕೊಟ್ಟು ಆಡಳಿತ ಪಕ್ಷದಿಂದ ಹೊರಬಂದರು. ಕಳೆದ ಉಪಚುನಾವಣೆಯಲ್ಲಿ 13 ಜನ ಗೆದ್ದು ಬಂದಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನವನ್ನು ಬಿಜೆಪಿ ಗೆದ್ದುಕೊಂಡಿದೆ. ಇದನ್ನು ನೋಡಿದರೆ ಜನರ ವಿಶ್ವಾಸ ಬಿಜೆಪಿ ಕಡೆ ಇದೆ ಎನ್ನುವುದು ಗೊತ್ತಾಗುತ್ತದೆ. ಮುನಿರತ್ನ ಈಗಾಗಲೇ ಗೆದ್ದಾಗಿದೆ, ಅಂತರ ಲೆಕ್ಕಹಾಕಬೇಕಿದೆ ಎಂದು ಹೇಳಿದರು.