ಬೆಂಗಳೂರು: ಉಪ ಚುನಾವಣೆಯ ಬಹಿರಂಗ ಪ್ರಚಾರ ಇಂದು ಸಂಜೆ ಅಂತ್ಯಗೊಳ್ಳಲಿದೆ. ಹೀಗಾಗಿ ನಿನ್ನೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭರ್ಜರಿ ರೋಡ್ ಶೋ ನಡೆಸಿದ್ರು. ಸುಡು ಬಿಸಿಲಿನಲ್ಲಿ ಈ ವಯಸ್ಸಲ್ಲೂ ಕಾಲಿಗೆ ಚಕ್ರ ಕಟ್ಟಿಕೊಂಡು ಬೆಳಗ್ಗೆಯಿಂದ ಸಂಜೆಯವರೆಗೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ಮತ ಯಾಚಿಸಿದ್ರು. ನಿಮ್ಮ ಮುನಿರತ್ನ ಮಿನಿಸ್ಟರ್ ಆಗಬೇಕಾದರೆ ಗೆಲ್ಲಿಸಿ ಅಂತ ಕೋರಿದ್ರು.
ಜ್ಞಾನಭಾರತಿ ವಾರ್ಡಿನ ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್ ಬಳಿ ಪ್ರಚಾರ ಆರಂಭಿಸಿದ ಸಿಎಂಗೆ ಪೂರ್ಣಕುಂಭದ ಭರ್ಜರಿ ಸ್ವಾಗತವೇ ಸಿಕ್ಕಿತು. ಲಾಕ್‍ಡೌನ್ ಟೈಂನಲ್ಲಿ ಮುನಿರತ್ನ ಕಾರ್ಯವನ್ನು ಕೊಂಡಾಡಿದ ಸಿಎಂ, ಯಾವ ಕಾರಣಕ್ಕೂ ಶೇ.70 ಗಿಂತ ಕಡಿಮೆ ಮತದಾನ ಆಗಬಾರದು. ಜಾತಿ ಕುಲ ಗೋತ್ರ ಯಾವುದು ಗೊತ್ತಿಲ್ಲ. ಹಿಂದೂ-ಮುಸ್ಲಿಂ-ಕ್ರೈಸ್ತರು ಅಂತ ಬೇಧ-ಭಾವ ಮಾಡಿಲ್ಲ. ಮುನಿರತ್ನ ಬಗ್ಗೆ ನಾವು ಏನು ನಿಮಗೆ ಹೇಳ ಬೇಕಾಗಿಲ್ಲ. ಅವರ ಕೆಲಸ ಏನು ಅಂತ ಎಲ್ಲರಿಗೂ ಗೊತ್ತಿದೆ ಅಂದ್ರು.
ಜ್ಞಾನಭಾರತಿ ವಾರ್ಡಿನ ಸುಂಕದ ಕಟ್ಟೆ, ಶ್ರೀನಿವಾಸ್ ನಗರ ಕಡೆಗಳಲ್ಲಿ ಸಿಎಂ ಪ್ರಚಾರ ಮಾಡಿದ್ರು. ಈ ವೇಳೆ ಮುನಿರತ್ನಗೆ ಸಿಎಂ ಯಡಿಯೂರಪ್ಪ ಹಾರ ಹಾಕಿದ್ರು. ಯಡಿಯೂರಪ್ಪ ಕಾಲಿಗೆ ಮುನಿರತ್ನ ನಮಸ್ಕರಿಸಿದ್ರು.
ಲಗ್ಗೆರೆಯ ಚೌಡೇಶ್ವರಿ ನಗರದಲ್ಲಿ ಬೃಹತ್ ರೋಡ್ ಶೋ ನಡೆಸಿದ್ದ ಸಿಎಂಗೆ ಅದ್ದೂರಿ ರೋಡ್ ಶೋ ನಡೆಸಿದ್ರು. ಕಳಸ ಹೊತ್ತ ಮಹಿಳೆಯರಿಂದ ಮೆರವಣಿಗೆ ಮಾಡಿದ್ರೆ, ಸಾಂಸ್ಕೃತಿಕ ಕಲಾ ತಂಡಗಳಿಂದ ನೃತ್ಯ ಪ್ರದರ್ಶನ ರೋಡ್ ಶೋಗೆ ರಂಗು ತುಂಬಿತು. ಈ ವೇಳೆ ಮಾತನಾಡಿ, ಮುಂದಿನ ದಿನಗಳಲ್ಲಿ ಆರ್ ಆರ್ ನಗರ ಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡ್ತೇವೆ. 50 ಸಾವಿರ ಮತಗಳ ಅಂತರದಲ್ಲಿ ಮುನಿರತ್ನರನ್ನು ಗೆಲ್ಲಿಸಿ ಅಂತ ಮನವಿ ಮಾಡಿದ್ರು.
ಚೌಡೇಶ್ವರಿ ನಗರದಿಂದ ಲಗ್ಗೆರೆಗೆ ಬಂದ ಸಿಎಂ ಪಕ್ಷದ ಮುಖಂಡ ಪ್ರಕಾಶ್ ಗೌಡ ಎಂಬವರ ಮನೆಯಲ್ಲಿ ಮಧ್ಯಾಹ್ನದ ಊಟ ಮಾಡಿದ್ರು. ಬಳಿಕ ಲಕ್ಷ್ಮಿದೇವಿನಗರ, ಗೊರಗುಂಟೆಪಾಳ್ಯದಲ್ಲಿ ರೋಡ್ ಶೋ ಮುಗಿಸಿ ಸಂಜೆ 6.30 ಹೊತ್ತಿಗೆ ಯಶವಂಶಪುರದಲ್ಲಿ ಅಂತ್ಯಗೊಳಿಸಿದ್ರು. ಹೋದ ಕಡೆಯಲೆಲ್ಲಾ ಅದ್ದೂರಿ ಸ್ವಾಗತವೇ ಸಿಕ್ಕಿತ್ತು. ಶುಕ್ರವಾರ ದರ್ಶನ್ ಪ್ರಚಾರ ಹಾಗೂ ಶನಿವಾರ ಮುಖ್ಯಮಂತ್ರಿ ರೋಡ್ ಶೋನಿಂದಾಗಿ ಮುನಿರತ್ನಗೆ ಆನೆಬಲವೇ ಸಿಕ್ಕಂತಾಗಿದೆ.