– ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು
ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದು, ರಾತ್ರಿ 2.30ಕ್ಕೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಅವರು ಅಮಿತ್ ಶಾ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಈ ಕುರಿತು ಏಮ್ಸ್ ಆಸ್ಪತ್ರೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಅಮಿತ್ ಶಾ ಅವರಿಗೆ ಕಳೆದ 3-4 ದಿನಗಳಿಂದ ಮೈ-ಕೈ ನೋವು, ಸುಸ್ತು ಕಾಣಿಸಿಕೊಂಡ ಹಿನ್ನೆಲೆ ಪೋಸ್ಟ್ ಕೋವಿಡ್ ಕೇರ್‍ಗೆ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ.
ಅಮಿತ್ ಶಾ ಅವರ ಕೊರೊನಾ ವರದಿ ನೆಗೆಟಿವ್ ಬಂದಿದ್ದು, ಏಮ್ಸ್ ಆಸ್ಪತ್ರೆಯ ಪೋಸ್ಟ್ ಕೋವಿಡ್ ಕೇರ್‍ಗೆ ದಾಖಲಿಸಿಕೊಳ್ಳಲಾಗಿದೆ. ಅವರು ಆರಾಮಾಗಿದ್ದು, ಆಸ್ಪತ್ರೆಯಿಂದಲೇ ಕೆಲಸ ಮಾಡಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಮಿತ್ ಶಾ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ನಂತರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಆಗಸ್ಟ್ 14ರಂದು ಅವರ ಕೊರೊನಾ ವರದಿ ನೆಗೆಟಿವ್ ಬಂದಿತ್ತು. ಬಳಿಕ ಕೆಲ ದಿನಗಳ ಕಾಲ ಹೋಮ್ ಐಸೋಲೇಶನ್‍ನಲ್ಲಿರುವುದಾಗಿ ಅವರು ತಿಳಿಸಿದ್ದರು. ಅದರ ಪ್ರಕಾರ ಮನೆಯಲ್ಲೇ ಐಸೋಲೇಟ್ ಆಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದರು. ಆದರೆ ರಾತ್ರಿ ಇದ್ದಕ್ಕಿದ್ದಂತೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊರೊನಾ ಸೋಂಕು ತಗುಲಿದ ಸಮಯದಲ್ಲಿ ಬೇಗ ಗುಣಮುಖನಾಗಲೆಂದು ನನಗೆ ಹಾಗೂ ನನ್ನ ಕುಟುಂಬಕ್ಕೆ ಹಾರೈಸಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ. ವೈದ್ಯರ ಸಲಹೆಯಂತೆ ಇನ್ನೂ ಕೆಲ ದಿನಗಳ ಕಾಲ ನಾನು ಹೋಮ್ ಐಸೋಲೇಶನ್‍ನಲ್ಲಿರುತ್ತೇನೆ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದರು.