– ಒನ್ ಮ್ಯಾನ್ ತ್ರಿಬಲ್ ಆ್ಯಕ್ಟಿಂಗ್
ಚಿಕ್ಕಬಳ್ಳಾಪುರ: ತಾನು ಹೋಂ ಮಿನಿಸ್ಟರ್ ತಮ್ಮ ಮಹೇಶ್ ಬೊಮ್ಮಾಯಿ. ನಮ್ಮ ಸಂಬಂಧಿ ನಿಮ್ಮ ಸ್ಟೇಷನ್‍ಗೆ ಬರುತ್ತಾನೆ ಅವನ ಪರವಾಗಿ ಕೆಲಸ ಮಾಡಿಕೊಡಿ ಎಂದು ಕಾಲ್ ಮಾಡಿದ ನಕಲಿ ಮಿನಿಸ್ಟರ್ ತಮ್ಮ ಈಗ ಜೈಲುಪಾಲಾಗಿರೋ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಅಂದಹಾಗೆ ಮೂಲತಃ ದೊಡ್ಡಬಳ್ಳಾಪುರ ತಾಲೂಕಿನವನಾದ ಟಿಎನ್ ಬಸವರಾಜು, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಪಿಎಸ್‍ಐ ಲಕ್ಷ್ಮೀನಾರಾಯಣ ಅವರ ಮೊಬೈಲ್‍ಗೆ ಕರೆ ಮಾಡಿ ತಾನು ಗೃಹಸಚಿವ ಬಸವರಾಜು ಬೊಮ್ಮಾಯಿ ಸೋದರ ಮಹೇಶ್ ಬೊಮ್ಮಾಯಿ ಮಾತಾಡ್ತಿದ್ದೀನಿ. ನಿಮ್ಮ ಸ್ಟೇಷನ್‍ಗೆ ಗೌರಿಬಿದನೂರು ತಾಲೂಕು ತರಿದಾಳು ಗ್ರಾಮದ ನಮ್ಮ ಸಂಬಂಧಿ ಶಿಕ್ಷಕ ರವಿಪ್ರಕಾಶ್ ಬರುತ್ತಾರೆ. ಅವರ ಮನೆಯ ಅಕ್ಕ ಪಕ್ಕದವರ ನಡುವೆ ಗಲಾಟೆ ಆಗಿದೆ ಅವರ ಸಮಸ್ಯೆಯನ್ನು ಬಗೆಹರಿಸಿಕೊಡಿ ಎಂದು ಹೇಳಿದ್ದಾನೆ.
ಹೋಂ ಮಿನಿಸ್ಟರ್ ತಮ್ಮ ಇರಬಹುದು ಎಂದು ಆಯ್ತು ಸರ್, ಮಾಡ್ತೀವಿ ಅಂತ ಪಿಎಸ್‍ಐ ಹೇಳಿದ್ದಾರೆ. ಮಧ್ಯಾಹ್ನ ಠಾಣೆಯ ಲ್ಯಾಂಡ್ ಲೈನ್‍ಗೆ ಕರೆ ಮಾಡಿದ ಇದೇ ವ್ಯಕ್ತಿ ನಾನು ಹೋಂ ಮಿನಿಸ್ಟರ್ ಪಿಎ, ಸಾಹೇಬ್ರ ರಿಲೇಷನ್ ಅವರ ಸಮಸ್ಯೆ ಬಗ್ಗೆ ಮಹೇಶ್ ಬೊಮ್ಮಾಯಿ ಸಾಹೇಬ್ರೆ ಹೇಳಿದ್ರಂತಲ್ಲ ಆ ಕೆಲಸ ಬೇಗ ಮುಗಿಸಿ ಎಂದು ಹೇಳಿದ್ದಾನೆ. ಆಗ ಪೊಲೀಸರು ಶಿಕ್ಷಕ ರವಿಪ್ರಕಾಶ್‍ನನ್ನು ಠಾಣೆಗೆ ಬಂದು ಕಂಪ್ಲೇಂಟ್ ಕೊಡುವಂತೆ ಹೇಳಿದ್ದಾರೆ. ಅದೇ ದಿನ ಸಂಜೆ ವೇಳೆಗೆ ಶಿಕ್ಷಕ ರವಿ ಪ್ರಕಾಶ್ ಜೊತೆ ಕರೆ ಮಾಡಿದ್ದ ನಕಲಿ ವ್ಯಕ್ತಿ ಬಸವರಾಜು ವಕೀಲ ಕೋಟು ಧರಿಸಿ ಠಾಣೆಗೆ ಬಂದಿದ್ದಾನೆ.
ನಾನು ಬಸವರಾಜು, ಮಹೇಶ್ ಬೊಮ್ಮಾಯಿ ಸರ್ ಲೀಗಲ್ ಅಡ್ವೈಸರ್ ಎಂದು ಹೇಳಿ ಪರಿಚಯ ಮಾಡಿಕೊಂಡಿದ್ದಾನೆ. ಆದರೆ ಪಿಎಸ್‍ಐ ಈತನ ಮಾತು ಹಾಗೂ ವರ್ತನೆ ಬಗ್ಗೆ ಅನುಮಾನಗೊಂಡು ವಕೀಲರ ಕಾರ್ಡ್ ಕೊಡಿ ಎಂದು ಕೇಳಿದಾಗ ನಕಲಿ ವ್ಯಕ್ತಿ ತಡಬಡಿಸಿದ್ದಾನೆ. ಕೂಡಲೇ ಇಬ್ಬರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಾಯ್ಬಿಟ್ಟಿದ್ದಾನೆ. ಶಿಕ್ಷಕ ರವಿಪ್ರಕಾಶ್ ಸಮಸ್ಯೆ ಬೇಗ ಬಗೆಹರಿಯಲಿ ದೊಡ್ಡವರ ಹೆಸರು ಹೇಳಿದರೆ ಕೆಲಸ ಆಗುತ್ತೆ ಅಂತ ಈ ರೀತಿ ಮಾಡಿದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿ ಬಸವರಾಜು ವಿರುದ್ಧ ಐಪಿಸಿ 419 ಹಾಗೂ 420 ಅಡಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳು ಈಗ ಜೈಲುಪಾಲಾಗಿದ್ದಾರೆ.