ರಾಯಚೂರು: ರಥಸಪ್ತಮಿ ಹಿನ್ನೆಲೆಯಲ್ಲಿ ಗುರು ರಾಯರ ಸನ್ನಿಧಿ ಮಂತ್ರಾಲಯ ಮಠದಲ್ಲಿ ಪಂಚರಥೋತ್ಸವ ಜರುಗಿಸಲಾಯಿತು. ಬಂಗಾರ ಪಲ್ಲಕ್ಕಿ ಉತ್ಸವದೊಂದಿಗೆ ಮಠದ ಪ್ರಾಂಗಣದಲ್ಲಿ ರಜತ ಅಂಬಾರಿ, ಸುವರ್ಣ ರಥ, ಮರದ ರಥ, ನವರತ್ನ ರಥ ಹಾಗೂ ಬೆಳ್ಳಿ ರಥ ಸೇರಿ ಒಟ್ಟು ಐದು ರಥಗಳು ರಾಯರ ವೃಂದಾವನದ ಸುತ್ತ ಪ್ರದಕ್ಷಿಣೆ ಹಾಕಿದವು.
ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥ ಸ್ವಾಮಿ ಪಂಚರಥೋತ್ಸವಕ್ಕೆ ವಿಶೇಷ ಪೂಜೆಯ ಮೂಲಕ ಚಾಲನೆ ನೀಡಿದರು. ನವರತ್ನ ರಥದಲ್ಲಿ ಕೃಷ್ಣ, ಸುವರ್ಣ ರಥದಲ್ಲಿ ಪ್ರಾಣದೇವರು ಆಂಜನೇಯ ಹಾಗೂ ಉಳಿದ ಮೂರು ರಥಗಳಲ್ಲಿ ರಾಯರನ್ನ ಮೆರವಣಿಗೆ ಮಾಡಲಾಯಿತು. ವಿವಿಧೆಡೆಯಿಂದ ಮಠಕ್ಕೆ ಆಗಮಿಸಿದ್ದ ನೂರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು. ರಥಸಪ್ತಮಿ ನಿಮಿತ್ತ ಮಠದ ಐದು ರಥಗಳ ವಿಶೇಷ ಉತ್ಸವ ಇಂದು ಜರುಗಿತು.
ಮಾರ್ಗಶಿರ ಮಾಸ, ಶುಕ್ಲಪಕ್ಷದ ಏಳನೆಯ ದಿನ ಬರುವ ರಥ ಸಪ್ತಮಿಯನ್ನು ಸೂರ್ಯ ಜಯಂತಿ ಅಂತಲೂ ಕರೆಯಲಾಗುತ್ತದೆ. ಸೂರ್ಯನು ಸಿಂಹ ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ದಿನವೇ ರಥಸಪ್ತಮಿ. ಹಿಂದೂ ಧಾರ್ಮಿಕ ದಿನಗಳಲ್ಲಿ ವಿಶೇಷವಾದ ಈ ದಿನವನ್ನ ಮಂತ್ರಾಲಯದಲ್ಲಿ ಪಂಚರಥೋತ್ಸವ ಮೂಲಕ ಸಂಭ್ರಮಿಸಲಾಯಿತು.