ಬೀದರ್: ಇಲ್ಲಿನ ಭೂ ಕಂದಾಯ ವಿಭಾಗದ ಸಹಾಯಕ ನಿರ್ದೇಶಕರಾಗಿದ್ದ 32 ವರ್ಷದ ಯುವ ಅಧಿಕಾರಿ ರವಿಕುಮಾರ್ ಕೊರೊನಾಗೆ ಬಲಿಯಾಗಿದ್ದಾರೆ.
ಕಳೆದ ಒಂದು ವಾರದಿಂದ ಇಲ್ಲಿನ ಬ್ರಿಮ್ಸ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪೂರ್ಣ ಗುಣಮುಖರಾಗಿ ಡಿಸ್ಚಾರ್ಜ್ ಹಂತಕ್ಕೆ ಬಂದ ವೇಳೆ ದಿಢೀರ್ ಆರೋಗ್ಯದಲ್ಲಿ ಏರುಪೇರಾಗಿ ಸಾವನ್ನಪ್ಪಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಇಲ್ಲಿನ ಡಿಸಿ ಕಚೇರಿಯ ಭೂ ಕಂದಾಯ ವಿಭಾಗದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಇವರು ಮೂಲತಃ ಮೈಸೂರಿನವರಾಗಿದ್ದು ಅಂಬುಲೆನ್ಸ್ ಮೂಲಕ ಮೃತದೇಹ ಮೈಸೂರಿಗೆ ರವಾನಿಸಲಾಗಿದೆ.
ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗುವ ಹಂತದಲ್ಲಿದ್ದ ರವಿಕುಮಾರ್ ಚೇತರಿಕೆ ಕಾರಣ ಇವರ ಆಕ್ಸಿಜನ್ ಸಹ ತೆಗೆಯಲಾಗಿತ್ತು. ಆದರೆ ನಿನ್ನೆ ಬೆಳಗ್ಗೆ ಇವರಿಗೆ ಅಚಾನಕ್ ಮೆದುಳಿನಲ್ಲಿ ರಕ್ತ ಕ್ಲಾಟ್(ಬ್ರೇನ್ ಬ್ಲಡ್ ಕ್ಲಾಟ್) ಆಗಿ ಕೋಮಾಗೆ ಜಾರಿ ರಾತ್ರಿ ಕೊನೆಯುಸಿರೆಳೆದ್ದಾರೆ.
ಇವರ ಸೂಕ್ತ ಚಿಕಿತ್ಸೆಗಾಗಿ ಡಿಸಿ ರಾಮಚಂದ್ರನ್, ಬ್ರಿಮ್ಸ್ ಮುಖ್ಯ ಆಡಳಿತಾಧಿಕಾರಿಯೂ ಆದ ಅಪರ ಡಿಸಿ ರುದ್ರೇಶ ಘಾಳಿ ಮಾಡಿದ ಇನ್ನಿಲ್ಲದ ಪ್ರಯತ್ನ ಫಲ ನೀಡಲಿಲ್ಲ.