ನವದೆಹಲಿ: ಬಜೆಟ್‌ನಲ್ಲಿ ಮಂಡನೆಯಾದ ನೂತನ ಸ್ವಯಂ ಪ್ರೇರಿತ ಗುಜುರಿ ನೀತಿಯಿಂದ ಅಂದಾಜು 50 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಂದಿನ 15 ದಿನಗಳ ಒಳಗಡೆ ಗುಜುರಿ ನೀತಿಯ ಬಗ್ಗೆ ಸಮಗ್ರವಾದ ವಿವರವನ್ನು ಪ್ರಕಟಿಸಲಾಗುವುದು. ಈ ನೀತಿಯಿಂದ ದೇಶದಲ್ಲಿ ಅಂದಾಜು 10 ಸಾವಿರ ಕೋಟಿ ರೂ. ಹೂಡಿಕೆಯಾಗಲಿದೆ ಎಂದು ಹೇಳಿದರು.
Advertisement
Advertisement
ಪ್ರಸ್ತುತ ಭಾರತದಲ್ಲಿ 20 ವರ್ಷ ಮೇಲ್ಪಟ್ಟ 51 ಲಕ್ಷ, 15 ವರ್ಷ ಮೇಲ್ಪಟ್ಟ 34 ಲಕ್ಷ ಲಘು ಮೋಟಾರು ವಾಹನಗಳಿವೆ. 15 ವರ್ಷ ಮೇಲ್ಪಟ್ಟ 17 ಲಕ್ಷ ಮಧ್ಯಮ ಮತ್ತು ಭಾರೀ ಗಾತ್ರದ ವಾಹನಗಳಿವೆ. ಈ ವಾಹನಗಳು ಯಾವುದೇ ಫಿಟ್‌ನೆಸ್ ಪ್ರಮಾಣಪತ್ರವನ್ನು ಹೊಂದಿಲ್ಲ. ಹೊಸ ವಾಹನಗಳಿಗೆ ಹೋಲಿಸಿದರೆ ಈ ವಾಹನಗಳು 10-12 ಪಟ್ಟು ಮಾಲಿನ್ಯವನ್ನು ಹೊರ ಹಾಕುತ್ತಿವೆ ಎಂದು ವಿವರಿಸಿದರು.
Advertisement
ಮೆಟಲ್(ಲೋಹ) ತ್ಯಾಜ್ಯ ಮರುಬಳಕೆ, ಸುಧಾರಿತ ಸುರಕ್ಷತೆ, ವಾಯುಮಾಲಿನ್ಯ ಮತ್ತು ಇಂಧನ ಆಮದು ಕಡಿಮೆ ಮಾಡುವುದರ ಜೊತೆಗೆ ಹೂಡಿಕೆಯನ್ನು ಉತ್ತೇಜಿಸಲು ಹೊಸ ನೀತಿ ಸಹಾಯವಾಗಲಿದೆ ಎಂದು ಅದರ ಪ್ರಯೋಜನವನ್ನು ತಿಳಿಸಿದರು.
Advertisement
ಬಜೆಟ್‌ನಲ್ಲಿ ಹೆದ್ದಾರಿ ಕ್ಷೇತ್ರಕ್ಕೆ 1,18,000 ಕೋಟಿ ರೂ. ಅನುದಾನ ನೀಡಿದ್ದನ್ನು ಸ್ವಾಗತಿಸಿದ ಗಡ್ಕರಿ ಇದರಿಂದಾಗಿ ದೇಶದಲ್ಲಿ ರಸ್ತೆ ಜಾಲವನ್ನು ವಿಸ್ತರಿಸಲು ಸಹಾಯವಾಗಲಿದೆ ಎಂದು ಹೇಳಿದರು.
ಬಜೆಟ್ ಭಾಷಣದಲ್ಲಿ ಸ್ವಯಂಪ್ರೇರಿತ ಗುಜುರಿ ನೀತಿ ಜಾರಿಯ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತಾಪ ಮಾಡಿದ್ದಾರೆ. 20 ವರ್ಷ ಮೇಲ್ಪಟ್ಟ ಖಾಸಗಿ ವಾಹನ, 15 ವರ್ಷ ಮೇಲ್ಪಟ್ಟ ವಾಣಿಜ್ಯ ವಾಹನಗಳು ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಬೇಕು ಎಂದು ಹೇಳಿದ್ದರು ಇದನ್ನೂ ಓದಿ : ಏನಿದು ಗುಜುರಿ ನೀತಿ? ದರ ನಿಗದಿ ಹೇಗೆ?