ಅಹಮದಾಬಾದ್: ಗುಜರಾತ್ ಸಿಎಂ ವಿಜಯ್ ರೂಪಾನಿ ಅವರಿಗೆ ಕೊರೊನಾ ಸೋಂಕು ದೃಢವಾಗಿದ್ದು, ಐಸೋಲೇಷನ್ ನಲ್ಲಿದ್ದಾರೆ. ಭಾನುವಾರ ಚುನಾವಣೆ ಪ್ರಚಾರದ ವೇಳೆ ವೇದಿಕೆಯ ಮೇಲೆ ಸಿಎಂ ಕುಸಿದಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ಪರೀಕ್ಷೆ ನಡೆಸಿದಾಗ ಸೋಂಕು ತಗುಲಿರೋದು ದೃಢವಾಗಿದೆ.
ಮುಖ್ಯಮಂತ್ರಿಗಳು ನಿರಂತರವಾಗಿ ಸಾರ್ವಜನಿಕ ಸಭೆಗಳಲ್ಲಿ ಭಾಗಿಯಾಗುತ್ತಿದ್ದರು. ನಿರಂತರವಾಗಿ ಜನರ ಸಂಪರ್ಕದಲ್ಲಿದ್ದರಿಂದ ಕೊರೊನಾ ಸೋಂಕು ತಗುಲಿರುವ ಸಾಧ್ಯತೆಗಳಿವೆ. ಮಹಾನಗರ ಪಾಲಿಕೆ ಚುನಾವಣೆಯ ಪ್ರಚಾರದಲ್ಲಿ ಕಳೆದ ಮೂರು ದಿನಗಳಿಂದ ಭಾಗಿಯಾಗಿದ್ದರು. ಸದ್ಯ ಆಸ್ಪತ್ರೆಯಲ್ಲಿ ಒಂದು ವಾರ ಇರಲಿದ್ದಾರೆ ಎಂದು ಡಿಸಿಎಂ ನಿತಿನ್ ಪಟೇಲ್ ಮಾಹಿತಿ ನೀಡಿದ್ದಾರೆ.
ವೇದಿಕೆಯಲ್ಲಿಯೇ ಕುಸಿದಿದ್ರು: ಭಾನುವಾರ ವಡೋದರಾದ ನಿಜಾಮಪುರನಲ್ಲಿ ಮುಖ್ಯಮಂತ್ರಿಗಳು ಎಲೆಕ್ಷನ್ ಕ್ಯಾಂಪನ್ ನಲ್ಲಿ ಭಾಗಿಯಾಗಿದ್ದ ವೇಳೆ ವೇದಿಕೆ ಮೇಲೆ ಭಾಷಣ ಮಾಡುತ್ತಿದ್ದಾಗಲೇ ಕುಸಿದಿದ್ದರು. ವಡೋದರಾದ ನಿಜಾಮಪುರನಲ್ಲಿ ಮೂರನೇ ಬಾರಿ ಚುನಾವಣೆ ಪ್ರಚಾರ ನಡೆಸುತ್ತಿದ್ದರು. ವೇದಿಕೆ ಮೇಲೆ ಮತದಾರರನ್ನು ಉದ್ದೇಶಿಸಿ ಮತನಾಡುವಾಗ ಸಿಎಂ ದಿಢೀರ್ ಕುಸಿದರು. ಚುನಾವಣೆ ಹಿನ್ನೆಲೆ ನಿರಂತರ ಪ್ರಚಾರದಲ್ಲಿ ತೊಡಗಿಕೊಂಡಿರುವ ಸಿಎಂ ಕಳೆದ ಎರಡು ದಿನಗಳಿಂದ ಸರಿಯಾಗಿ ವಿಶ್ರಾಂತಿ ಸಹ ಪಡೆದುಕೊಂಡಿರಲಿಲ್ಲ. ಈ ಹಿನ್ನೆಲೆ ಕಡಿಮೆ ರಕ್ತದೊತ್ತಡದಿಂದಾಗಿ ಕುಸಿದಿದ್ದಾರೆ ಎಂದು ವರದಿಯಾಗಿದೆ.