ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಅವರದ್ದು ಮಾನವೀಯತೆಗೆ ಮಿಡಿಯುವ ಹೃದಯ ಎಂಬುದು ತಿಳಿದೇ ಇದೆ. ತಮ್ಮ ಮನೆಗೆಲಸದವರು ಹಾಗೂ ತಮ್ಮ ಮನೆಯಲ್ಲಿರುವವರಿಗೆ ಅವರು ಆಗಾಗ ಸಹಾಯ ಮಾಡುತ್ತಲೇ ಇರುತ್ತಾರೆ. ಅದೇ ರೀತಿ ಇದೀಗ ವಿಶೇಷ ಮಹಿಳೆಯೊಬ್ಬರ ಹುಟ್ಟುಹಬ್ಬ ಆಚರಿಸುವ ಮೂಲಕ ಮತ್ತೊಮ್ಮೆ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ.
ರಾಧಿಕಾ ಪಂಡಿತ್ ಅವರು ಮನೆಯಲ್ಲಿ ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದಾರೆ. ಲಾಕ್‍ಡೌನ್ ಆದಾಗಿನಿಂದ ಸಿನಿಮಾ ಕೆಲಸಗಳೂ ಸ್ಥಗಿತವಾಗಿದ್ದು, ರಾಕಿಂಗ್ ಸ್ಟಾರ್ ಯಶ್ ಸಹ ಮನೆಯಲ್ಲೇ ಕುಟುಂಬ ಹಾಗೂ ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದಾರೆ. ಈ ಕುರಿತು ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಅಪ್‍ಡೇಟ್ ನೀಡುತ್ತಿದ್ದಾರೆ.
ಇತ್ತೀಚೆಗೆ ಐರಾಗೆ 18 ತಿಂಗಳು ತುಂಬಿದ್ದಕ್ಕಾಗಿ ರಾಧಿಕಾ ಪಂಡಿತ್ ಮ್ಯಾಂಗೋ ಚೀಸ್ ಕೇಕ್ ತಯಾರಿಸಿದ್ದರು. ಈ ಕುರಿತು ರಾಧಿಕಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅಲ್ಲದೆ ಐರಾ ತನ್ನ ತಮ್ಮನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಲಾಲಿ ಹಾಡುತ್ತಿರುವ ವಿಡಿಯೋವನ್ನು ಸಹ ಪೋಸ್ಟ್ ಮಾಡಿದ್ದರು. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಅಪ್‍ಡೇಟ್ ನೀಡುತ್ತಿದ್ದಾರೆ.
ಇದೀಗ ತಮ್ಮ ಮನೆಯಲ್ಲಿ ಕೆಲಸ ಮಾಡುವ ಗೀತಾ ಅವರ ಹುಟ್ಟುಹಬ್ಬಕ್ಕಾಗಿ ಸ್ವತಃ ರಾಧಿಕಾ ಪಂಡಿತ್ ಅವರೇ ಕೇಕ್ ತಯಾರಿಸಿದ್ದಾರೆ. ಅವರ ಮನೆಯಲ್ಲೇ ಹುಟ್ಟುಹಬ್ಬ ಆಚರಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಾಕಿದ್ದು, ಸಾಲುಗಳನ್ನು ಸಹ ಬರೆದಿದ್ದಾರೆ. ಇವರು ಗೀತಾ, ಕಳೆದ 8 ವರ್ಷಗಳಿಂದ ಮನಗೆಲಸದಲ್ಲಿ ಸಹಾಯ ಮಾಡುತ್ತಿದ್ದಾರೆ. ನಮ್ಮ ಕುಟುಂಬದವರಂತೇ ಆಗಿಬಿಟ್ಟಿದ್ದಾರೆ. ನಮ್ಮ ಬಗ್ಗೆ ಚೆನ್ನಾಗಿ ಕಾಳಜಿ ವಹಿಸುತ್ತಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಅವರ ಬಗ್ಗೆ ನಾವು ಹೆಚ್ಚು ಕಾಳಜಿ ವಹಿಸಬೇಕಿದೆ. ನೀವೂ ಸಹ ನಿಮ್ಮ ಮನೆಯಲ್ಲಿ ಕೆಲಸಕ್ಕೆ ಸಹಾಯ ಮಾಡುವವರನ್ನು ಇಂತಹ ಸಂದರ್ಭದಲ್ಲಿ ನಿರ್ಲಕ್ಷ್ಯ ಅಥವಾ ಮರೆಯುವುದಿಲ್ಲ ಎಂಬ ನಂಬಿಕೆ ಇದೆ. ಅವರು ನಮಗೂ ಕೂಡ ಅವಶ್ಯಕ ಎಂದು ಬರೆದು, ಕೊನೆಗೆ ಹಾರ್ಟ್ ಸಿಂಬಾಲ್ ಹಾಕಿದ್ದಾರೆ.
ಈ ಚಿತ್ರದಲ್ಲಿ ನೀವು ನೋಡುತ್ತಿರುವ ಕೇಕ್‍ನ್ನು ಕೆಲ ದಿನಗಳ ಹಿಂದೆ ಅವರ ಹುಟ್ಟುಹಬ್ಬಕ್ಕೆ ನಾನೇ ತಯಾರಿಸಿದ್ದೆ ಎಂದು ತಿಳಿಸಿದ್ದಾರೆ. ಪೋಸ್ಟ್‍ಗೆ ಅವರ ಅಭಿಮಾನಿಗಳು ಕಮೆಂಟ್ ಮೂಲಕ ಪ್ರತಿಕ್ರಿಯಿಸುತ್ತಿದ್ದು, ಯೂ ಆರ್ ಅಮೇಜಿಂಗ್ ವುಮೆನ್ ಎಂದು ಬರೆದಿದ್ದಾರೆ. ಮತ್ತೊಬ್ಬರು ಕಮೆಂಟ್ ಮಾಡಿ, ಮ್ಯಾಡಮ್ ನೀವೇಷ್ಟು ಹೃದಯವಂತರು, ಸೋ ಲವ್ಲಿ, ಸೋ ಸ್ವೀಟ್ ಆಫ್ ಯು, ಹ್ಯಾಪಿ ಬರ್ತ್‍ಡೇ ಟು ಗೀತಾ ಆಂಟಿ ಎಂದು ಕಮೆಂಟ್ ಮಾಡಿದ್ದಾರೆ. ಹೀಗೆ ಸಾಕಷ್ಟು ಜನ ರಾಧಿಕಾ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.