ಇಸ್ಲಾಮಾಬಾದ್: ಮನೆ ಕೆಲಸಕ್ಕೆ ಇದ್ದ ಎಂಟು ವರ್ಷದ ಬಾಲಕಿ ಪಂಜರದಲ್ಲಿ ಇದ್ದ ಗಿಳಿಯನ್ನು ಬಿಟ್ಟಿದ್ದಕ್ಕೆ ಮನೆ ಮಾಲೀಕರು ಆಕೆಯನ್ನು ಹೊಡೆದು ಕೊಂದಿರುವ ಘಟನೆ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಜೊಹ್ರಾ ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ ಜೊಹ್ರಾ ಹಕ್ಕಿಗಳಿಗೆ ಆಹಾರ ಹಾಕಲು ಪಂಜರದ ಬಾಗಿಲನ್ನು ತೆರೆದಿದ್ದಾಳೆ. ಈ ವೇಳೆ ಒಂದು ಗಿಳಿ ಮರಿ ತಪ್ಪಿಸಿಕೊಂಡು ಹಾರಿ ಹೋಗಿದೆ. ಇದರಿಂದ ಕೋಪಗೊಂಡ ಮನೆಯ ಮಾಲೀಕರು ಆಕೆಯನ್ನು ಹೊಡೆದು ಸಾಯಿಸಿದ್ದಾರೆ.
ಜೊಹ್ರಾ ಕೆಲಸ ಮಾಡುತ್ತಿದ್ದ ಮನೆಯವರು ಪ್ರಾಣಿ ಪಕ್ಷಿಗಳನ್ನು ಸಾಕಿ ಅವುಗಳನ್ನು ಮಾರುವ ವ್ಯಾಪಾರ ಮಾಡುತ್ತಿದ್ದರು. ಜೊತೆಗೆ ತಮ್ಮ ಮನೆಯಲ್ಲಿ ಇರುವ ಪುಟ್ಟಮಕ್ಕಳನ್ನು ನೋಡಿಕೊಳ್ಳಲು ಜೊಹ್ರಾಳನ್ನು ಮನೆ ಕೆಲಸಕ್ಕೆ ಇಟ್ಟಿಕೊಂಡಿದ್ದರು. ಈ ವೇಳೆ ಜೊಹ್ರಾ ಗಿಳಿ ಹಾರಿಹೋಗಲು ಬಿಟ್ಟಿದ್ದಾಳೆ ಎಂದು ಮಾಲೀಕರು ಮನಬಂದಂತೆ ಥಳಿಸಿದ್ದಾರೆ. ಪ್ರಜ್ಞಾಹೀನಾಳದ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸೋಮವಾರ ಸಾವನ್ನಪ್ಪಿದ್ದಾಳೆ.
ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ರಾವಲ್ಪಿಂಡಿ ಪೊಲೀಸ್ ಅಧೀಕ್ಷಕ ಜಿಯಾ ಉದ್ದೀನ್, ಪ್ರಾಥಮಿಕ ತನಿಖೆಯ ಪ್ರಕಾರ ಆಸ್ಪತ್ರೆಗೆ ಬಾಲಕಿಯನ್ನು ಕರೆದುಕೊಂಡು ಬಂದಾಗ ಆಕೆ ಬದುಕಿದ್ದಳು. ಆದರೆ ಆಕೆಯ ಮುಖ, ಕೈ-ಕಾಲು, ಪಕ್ಕೆಲುಬು ಮತ್ತು ಕಾಲಿನ ಕೆಳಭಾಗದಲ್ಲಿ ಗಂಭೀರ ಗಾಯಗಳಾಗಿದ್ದವು. ಜೊತೆಗೆ ಬಾಲಕಿಯ ತೊಡೆಯ ಭಾಗದಲ್ಲಿ ಗಾಯವಾಗಿದ್ದ ಕಾರಣ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರಬವುದು ಎಂದು ಶಂಕಿಸಲಾಗಿದೆ ಎಂದು ಹೇಳಿದ್ದಾರೆ.
ಜೊಹ್ರಾಳನ್ನು ಚಿಕ್ಕಮಕ್ಕಳನ್ನು ನೋಡಿಕೊಳ್ಳುವ ಮನೆಯ ಕೆಲಸಕ್ಕೆ ಇಟ್ಟಿಕೊಳ್ಳಲಾಗಿತ್ತು. ಈ ಕೆಲಸಕ್ಕೆ ಹಣದ ರೂಪದಲ್ಲಿ ಅವಳ ಓದಿಗೆ ಸಹಾಯ ಮಾಡುವುದಾಗಿ ಮಾಲೀಕರು ಹೇಳಿದ್ದರು. ಆದರೆ ಗಿಳಿಗಾಗಿ ಆಕೆಯಯನ್ನು ಕ್ರೂರವಾಗಿ ಕೊಂದಿದ್ದಾರೆ. ಈ ವಿಚಾರವಾಗಿ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ. ಜೊತೆಗೆ ತನಿಖೆ ಮುಂದುವರೆದಿದೆ ಎಂದು ಜಿಯಾ ಉದ್ದೀನ್ ಮಾಹಿತಿ ನೀಡಿದ್ದಾರೆ.