ಗಿಫ್ಟ್ ಸಿಕ್ಕಿದ ಅರ್ಧ ಹಣ ಮಗುವಿನ ಕುಟುಂಬಕ್ಕೆ – ಮತ್ತೆ ಜನರ ಮನ ಗೆದ್ದ ಮಯೂರ್

Public TV
2 Min Read
MAYUR SHELKE

ಮುಂಬೈ: ವೇಗವಾಗಿ ರೈಲು ಬರುತ್ತಿದ್ದಂತೆಯೇ ಶರವೇಗದಲ್ಲಿ ಓಡಿ ಹೋಗಿ ಬಾಲಕನನ್ನು ರಕ್ಷಿಸುವ ಮೂಲಕ ಭಾರೀ ಮೆಚ್ಚುಗೆಗೆ ಪಾತ್ರರಾರಾಗಿರುವ ಮಯೂರ್ ಶೆಲ್ಕೆ ಅವರು ಇದೀಗ ಮತ್ತೊಂದು ಮಾನವೀಯ ಕಾರ್ಯದ ಮೂಲಕ ಮತ್ತೆ ನಾಡಿನ ಜನರ ಮನ ಗೆದ್ದಿದ್ದಾರೆ.

ಹೌದು. ಮಯೂರ್ ಅವರು ತನಗೆ ನೀಡಲಾಗಿರುವ ಹಣದಲ್ಲಿ ಅರ್ಧದಷ್ಟು ಹಣವನ್ನು ಮಗುವಿನ ಕುಟುಂಬಕ್ಕೆ ನೀಡಲು ಬಯಸುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ಜನರ ಹೃದಯವನ್ನು ಗೆದ್ದು ಬೀಗಿದ್ದಾರೆ.

ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಮಯೂರ್, ನಾನು ರಕ್ಷಿಸಿದ ಮಗುವಿನ ಹಿನ್ನೆಲೆ ನೋಡಿದಾಗ ಕುಟುಂಬದ ಕಷ್ಟ ಅರ್ಥವಾಯಿತು. ಹೀಗಾಗಿ ನನಗೆ ಕೊಟ್ಟಿರುವ ಪ್ರೋತ್ಸಾಹಕ ಧನದ ಅರ್ಧದಷ್ಟು ಹಣವನ್ನು ಮಗುವಿನ ಏಳಿಗೆ ಹಾಗೂ ಶಿಕ್ಷಣಕ್ಕಾಗಿ ನೀಡುತ್ತೇನೆ ಎಂದು ತಿಳಿಸಿದ್ದಾರೆ.

ಶರವೇಗದಲ್ಲಿ ಓಡಿ ರೈಲು ಬರುತ್ತಿರುವುದನ್ನು ಲೆಕ್ಕಿಸದೆ ಹಳಿ ಮೇಲೆ ಸಿಲುಕಿದ್ದ ಮಗುವನ್ನು ರಕ್ಷಿಸಿದ ರೈಲ್ವೆ ವಲಯದ ಪಾಯಿಂಟ್ ಮನ್ ಮಯೂರ್ ಶೆಲ್ಕೆಗೆ ಕೇಂದ್ರ ರೈಲ್ವೆ ಇಲಾಖೆಯಿಂದ 50 ಸಾವಿರ ರೂ. ಬಹುಮಾನ ನೀಡಿದರೆ, ಇತ್ತ ಬೈಕ್ ಕೂಡ ಉಡುಗೊರೆಯಾಗಿ ಸಿಕ್ಕಿತ್ತು.

Mayur ShelkePointsman

ಮಗುವನ್ನು ರಕ್ಷಿಸಿದ ಮಯೂರ್ ವೀಡಿಯೋ ಎಲ್ಲಡೆ ವೈರಲ್ ಆಗುತ್ತಿದ್ದಂತೆಯೇ ಅವರಿಗೆ ಮೆಚ್ಚುಗೆಯ ಮಹಾಪೂರಗಳೇ ಹರಿಬಂದಿದೆ. ಮಯೂರ್ ಅವರ ಈ ಮಾನವೀಯ ಕಾರ್ಯ ಹಾಗೂ ಧೈರ್ಯಕ್ಕೆ ರೈಲ್ವೇ ಇಲಾಖೆ ಹಣ ನೀಡುವ ಮೂಲಕ ಗೌರವ ತೋರಿದರೆ, ಇತ್ತ ಜಾವಾ ಕ್ಲಾಸಿಕ್ ಬೈಕ್ ಉಡುಗೊರೆಯಾಗಿ ದೊರೆಯಲಿದೆ.

ಮಹೀಂದ್ರಾ ಕಂಪನಿ ಪಡೆತನದ ಜಾವಾ ಬೈಕ್ಸ್ ಸಿಇಓ ಅನುಪಮ್ ಥರೇಜಾ ಅವರು ಮಯೂರ್ ಅವರ ಸಾಹಸಕ್ಕೆ ತಲೆಬಾಗಿ ಸಂಸ್ಥೆ ವತಿಯಿಂದ ಜಾವಾ ಕ್ಲಾಸಿಕ್ ಬೈಕ್ ಉಡುಗೊರೆ ನೀಡುವುದಾಗಿ ಟ್ವೀಟ್ ಮಾಡುವ ಮೂಲಕವಾಗಿ ತಿಳಿಸಿದ್ದರು. ಮಯೂರ್ ಅವರ ಧೈರ್ಯ ಮೆಚ್ಚಿ ಅವರಿಗೆ ಜಾವಾ ಬೈಕ್ ಉಡುಗೊರೆಯಾಗಿ ನೀಡಲು ಇಚ್ಚಿಸುತ್ತೇವೆ. ಅವರ ಸಾಹಸ ಕಾರ್ಯಕ್ಕೆ ಈ ಮೂಲಕವಾಗಿ ಗೌರವ ನೀಡುವುದಾಗಿ ಟ್ವೀಟ್ ನಲ್ಲಿ ತಿಳಿಸಿದ್ದರು.

ಏನಿದು ಘಟನೆ..?
ಮಹಾರಾಷ್ಟ್ರದ ಮುಂಬೈನ ವಂಗನಿ ರೈಲು ನಿಲ್ದಾಣದ ಎರಡನೇ ಪ್ಲಾಟ್‍ಫಾರ್ಮ್‍ನಲ್ಲಿ ಏಪ್ರಿಲ್ 17ರಂದು ಮಧ್ಯಾಹ್ನ ಮಹಿಳೆ ಮತ್ತು ಮಗು ನಡೆದುಕೊಂಡು ಹೋಗುತ್ತಿದ್ದಾಗ ಮಗು ಆಯ ತಪ್ಪಿ ಹಳಿ ಮೇಲೆ ಬಿದ್ದಿದೆ. ಎದುರಿನಿಂದ ರೈಲು ಅತ್ಯಂತ ವೇಗವಾಗಿ ಮಗು ಬಿದ್ದ ಹಳಿ ಮೇಲೆಯೇ ಬರುತ್ತಿತ್ತು. ಮಗುವಿನ ಜೊತೆಗೆ ಇದ್ದ ಮಹಿಳೆ ಭಯಗೊಂಡು ತಕ್ಷಣಕ್ಕೆ ಏನು ಮಾಡಬೇಕೆಂದು ತಿಳಿದಿರಲಿಲ್ಲ. ಭಯದಿಂದ ಮಗುವನ್ನು ಕಾಪಾಡಲು ನೋಡುತ್ತಿದ್ದರು. ಮಗು ಹಳಿ ಮೇಲೆ ಬಿದ್ದಿರುವುದನ್ನು ಕಂಡು ರೈಲು ನಿಲ್ದಾಣದ ಕೆಲಸಗಾರ ಮಯೂರ್ ಶೆಲ್ಕೆ ಮಿಂಚಿನ ವೇಗದಲ್ಲಿ ಓಡಿ ಮಗುವನ್ನು ಎತ್ತಿ ಪ್ಲಾಟ್‍ಫಾರ್ಮ್ ಮೇಲೆ ಹಾಕಿದರು. ರೈಲು ಡಿಕ್ಕಿ ಹೊಡೆಯುತ್ತದೆ ಎನ್ನುವಷ್ಟರಲ್ಲಿ ಕೆಲವೇ ಸೆಕೆಂಡುಗಳಲ್ಲಿ ಪ್ಲಾಟ್‍ಫಾರ್ಮ್ ಮೇಲೆ ಹಾರಿ ತಮ್ಮ ಪ್ರಾಣ ಹಾಗೂ ಮಗುವಿನ ಪ್ರಾಣವನ್ನು ಉಳಿಸಿದ್ದರು.

ಈ ದೃಶ್ಯ ಸಿಟಿವಿಯಲ್ಲಿ ಸೆರೆಯಾಗಿತ್ತು. ಅಲ್ಲದೆ ಆ ಬಳಿಕ ವೀಡಿಯೋ ಸಾಕಷ್ಟು ವೈರಲ್ ಆಗಿತ್ತು. ಈ ಘಟನೆಯ ವೀಡಿಯೋವನ್ನು ಕೇಂದ್ರ ರೈಲ್ವೇ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿಕೊಂಡು, ಮಗುವಿನ ಜೀವ ಉಳಿಸಲು ತನ್ನ ಪ್ರಾಣವನ್ನು ಪಣಕ್ಕಿಟ್ಟಿದ್ದಾರೆ. ನೌಕರನ ಧೈರ್ಯ ಮತ್ತು ಕರ್ತವ್ಯದ ಬಗ್ಗೆ ಅತ್ಯಂತ ಭಕ್ತಿಗೆ ನಮಸ್ಕರಿಸುತ್ತೇವೆ. ನೌಕರನಿಗೆ ಅಭಿನಂದನೆಗಳು ಎಂದು ಬರೆದುಕೊಂಡಿತ್ತು. ರೈಲ್ವೆ ಸಿಬ್ಬಂದಿಯ ಕಾರ್ಯವನ್ನು ಮೆಚ್ಚಿ ಉಳಿದ ಸಿಬ್ಬಂದಿ ಚಪ್ಪಾಳೆ ತಟ್ಟಿ ಅಭಿನಂದಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *