ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ ಹಠಾತ್ ಗಾಳಿಪಟದ ದಾರ ಸಿಲುಕಿ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ನಗರದ ಆಡುಗೋಡಿ ಸಂಚಾರಿ ಪೊಲೀಸ್ ಠಾಣೆ ಬಳಿ ಈ ಘಟನೆ ನಡೆದಿದ್ದು, ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ ತಡರಾತ್ರಿ ನಗರದ ಆಡುಗೋಡಿ ಸಮೀಪದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಳಿ ವ್ಯಕ್ತಿಯೊಬ್ಬರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು.
Please Ban gaalipata kites. Using Chinese manja thread is highly dengerous. ☠️⚠️????????⚰️ @BSYBJP @Tejasvi_Surya @drashwathcn @MumbaiPolice @BBMPCOMM @PMOIndia @narendramodi @publictvnews @the_hindu @timesofindia @kspfactcheck @PuneCityPolice @TelanganaDGP @CPBlr pic.twitter.com/ty0uEjlxB2
— Bharath Kumar B (@ibharatbantanal) June 25, 2021
ಈ ಸಂದರ್ಭದಲ್ಲಿ ಆಡುಗೋಡಿ ಸಂಚಾರ ಠಾಣೆ ಮುಂಭಾಗದ ರಸ್ತೆಯಲ್ಲಿ ಏಕಾಏಕಿ ಗಾಳಿಪಟದ ದಾರ ಕತ್ತಿಗೆ ಸಿಕ್ಕಿಹಾಕಿಕೊಂಡಿದೆ. ಪರಿಣಾಮ ಕತ್ತಿನ ಭಾಗಕ್ಕೆ ಗಾಯವಾಗಿ ರಕ್ತಸ್ರಾವವಾಗುತ್ತಿತ್ತು. ಕತ್ತಿಗೆ ಸಿಲುಕಿದ ದಾರವನ್ನು ತಪ್ಪಿಸಲು ಕೈಯಿಂದ ದಾರ ಎಳೆದಾಗ ಕೈಗೂ ತೀವ್ರ ಸ್ವರೂಪದ ಗಾಯವಾಗಿದ್ದು, 2 ಬೆರಳುಗಳು ತುಂಡಾಗುವ ಹಂತಕ್ಕೆ ಬಂದಿವೆ.
ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಾದ ವ್ಯಕ್ತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಡೆದಿರುವ ಘಟನೆಯ ಬಗ್ಗೆ ಗಾಯಗೊಂಡಿರುವ ವ್ಯಕ್ತಿ ವಿವರಿಸಿದ ವಿಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ಗಾಳಿಪಟದ ದಾರದಿಂದ ವ್ಯಕ್ತಿಗೆ ಗಾಯ, ನೆಲಕ್ಕೆ ಚಿಮ್ಮಿದ ನೆತ್ತರು
ಗಾಯಾಳು ಘಟನೆ ಬಗ್ಗೆ ವಿವರಿಸಿದ ವೈರಲ್ ವಿಡಿಯೋದಲ್ಲಿ, ಅಧಿಕಾರಿಗಳು, ಜನಪ್ರತಿನಿಧಿಗಳು ದಯವಿಟ್ಟು ಎಚ್ಚೆತ್ತುಕೊಂಡು ಗಾಳಿಪಟವನ್ನು ನಿಷೇಧ ಮಾಡಿ. ಇದರಿಂದ ಮನುಷ್ಯರಿಗೂ, ಪ್ರಾಣಿ ಪಕ್ಷಿಗಳಿಗೂ ಅಪಾಯವಿದೆ. ನಾನು ಅಪಾಯದಿಂದ ಪಾರಾಗಿದ್ದೇನೆ, ಚಿಕ್ಕ ಹುಡುಗರಾಗಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು? ಊಹಿಸಲು ಕಷ್ಟವಾಗುತ್ತದೆ. ನಾನು ಹೆಲ್ಮೆಟ್ ಧರಿಸಿ, ಸಂಚಾರ ನಿಯಮಗಳನ್ನು ಪಾಲಿಸಿಕೊಂಡೇ ಹೋಗುತ್ತಿದ್ದೆ. ಆದ್ದರಿಂದ, ಸಂಬಂಧಿಸಿದ ಅಧಿಕಾರಿಗಳು ಈ ವಿಷಯದ ಬಗ್ಗೆ ಗಮನಹರಿಸುವಂತೆ ಮನವಿ ಗಾಯಾಳು ಮನವಿ ಮಾಡಿದ್ದಾರೆ.