ನವದೆಹಲಿ: ಗಾಂಜಾ ಹಾಗೂ ಗಾಂಜಾ ಅಂಟನ್ನು ಅಪಾಯಕಾರಿ ಮಾದಕ ವಸ್ತುಗಳ ಪಟ್ಟಿಯಿಂದ ಹೊರಗಿಡುವ ಸಂಬಂಧ ವಿಶ್ವಸಂಸ್ಥೆ ಮಹತ್ವದ ನಿರ್ಧಾರ ಕೈಗೊಂಡಿದೆ.
ಮಾದಕ ದ್ರವ್ಯ ವಸ್ತುಗಳಿಗೆ ಸಂಬಂಧಿಸಿದ ಆಯೋಗದ ಅಧಿವೇಶನ ಡಿಸೆಂಬರ್ 2ರಿಂದ 4ರವರೆಗೆ ನಡೆಯಿತು. ಈ ಅಧಿವೇಶನದಲ್ಲಿ ಭಾರತ ಸೇರಿದಂತೆ 27 ದೇಶಗಳು ಪರವಾಗಿ ಮತ ಹಾಕಿದ್ದರಿಂದ ನಿರ್ಣಯ ಅಂಗೀಕಾರವಾಗಿದೆ.
ಬೆಂಬಲ ನೀಡಿದದವರು ಯಾರು?
ಮಾದಕ ವಸ್ತುಗಳಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಆಯೋಗದ 1961ರ ಒಪ್ಪಂದದ 4ನೇ ಅನುಚ್ಛೇದದಡಿ ಹೆರಾಯಿನ್ನಂತಹ ಅಪಾಯಕಾರಿ ಮಾದಕ ವಸ್ತುಗಳ ಪಟ್ಟಿಯಲ್ಲಿ ಗಾಂಜಾ ಇತ್ತು. ಈ ಪಟ್ಟಿಯಿಂದ ಗಾಂಜಾವನ್ನು ಹೊರಗಿಡಲು 53 ಸದಸ್ಯ ರಾಷ್ಟ್ರಗಳು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದವು.
ಭಾರತ, ಅಮೆರಿಕ, ಯುರೋಪ್ ಒಕ್ಕೂಟದ ಬಹುತೇಕ ದೇಶಗಳು ಸೇರಿ 27 ರಾಷ್ಟ್ರಗಳು ನಿರ್ಣಯದ ಪರವಾಗಿ ಮತ ಚಲಾವಣೆ ಮಾಡಿದ್ದರೆ ಚೀನಾ, ಪಾಕಿಸ್ತಾನ, ರಷ್ಯಾ ಸೇರಿ 25 ದೇಶಗಳು ವಿರುದ್ಧ ಹಾಕಿದವು. ಉಕ್ರೇನ್ ತಟಸ್ಥವಾಗಿ ನಿಂತಿತು.
ಏನು ಲಾಭ?
ಅಪಾಯಕಾರಿ ಮಾದಕ ವಸ್ತುಗಳ ಪಟ್ಟಿಯಲ್ಲಿದ್ದ ಕಾರಣ ಗಾಂಜಾವನ್ನು ಔಷಧಿ ಹಾಗೂ ಚಿಕಿತ್ಸೆಗೆ ಬಳಸಲು ಸಾಧ್ಯವಾಗಿರಲಿಲ್ಲ. ವಿಶ್ವಸಂಸ್ಥೆ ಈ ಪಟ್ಟಿಯಿಂದ ಗಾಂಜಾವನ್ನು ಹೊರಗಡೆ ಇಟ್ಟ ಕಾರಣ ಇನ್ನು ಮುಂದೆ ಬಳಸಬಹುದಾಗಿದೆ.
ಭಾರತದಲ್ಲಿ ಮುಂದೇನು?
ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ(ಎನ್ಡಿಪಿಎಸ್) 1985ರ ಪ್ರಕಾರ ಪ್ರಕಾರ ಗಾಂಜಾ ಉತ್ಪಾದನೆ, ಮಾರಾಟ, ಖರೀದಿ, ವಶದದಲ್ಲಿ ಇಟ್ಟುಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಆರೋಪ ಸಾಬೀತಾದರೆ 6 ತಿಂಗಳು ಜೈಲು ಮತ್ತು ಗರಿಷ್ಟ 10 ಸಾವಿರ ರೂ. ದಂಡ ವಿಧಿಸಬಹುದಾಗಿದೆ.
ಎನ್ಡಿಪಿಎಸ್ ಕಾಯ್ದೆಯ ಅಡಿಯಲ್ಲಿ ಈಗಾಗಲೇ ಸ್ಯಾಂಡಲ್ವುಡ್, ಬಾಲಿವುಡ್ ಸೇರಿದಂತೆ ಹಲವರ ಮೇಲೆ ಪ್ರಕರಣ ದಾಖಲಾಗಿದ್ದು ಅರೆಸ್ಟ್ ಮಾಡಲಾಗಿದೆ. ಈಗ ಭಾರತ ನಿರ್ಣಯದ ಪರವಾಗಿ ಮತದಾನ ಮಾಡಿದ್ದು ಮುಂದಿನ ದಿನಗಳಲ್ಲಿ ಕಠಿಣವಾಗಿರುವ ಎನ್ಡಿಪಿಎಸ್ ಕಾಯ್ದೆ ಮೃದುವಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.
ಈ ವಿಚಾರದದ ಬಗ್ಗೆ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ಹೇರಾಯಿನ್ ಇರುವ ಪಟ್ಟಿಯಲ್ಲಿ ಗಾಂಜಾವನ್ನು ಸೇರಿಸಿದ್ದು ತಪ್ಪು. ಗಾಂಜಾವನ್ನು ಸೇವಿಸಿ ಸಮಸ್ಯೆಯಾಗಿದೆ ಎಂದು ಹೇಳಿಕೊಳ್ಳುವ ಮಂದಿ ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಅಫೀಮು ಸೇವನೆಯಿಂದ ಹೆಚ್ಚಿನ ಸಮಸ್ಯೆಯಾಗುತ್ತದೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಅಪಾಯಕಾರಿ ಮಾದಕ ವಸ್ತುಗಳ ಪಟ್ಟಿಯಿಂದ ಗಾಂಜಾವನ್ನ ಹೊರಗಡೆ ಇಡಬೇಕಾದರೆ ಡ್ರಗ್ ಮತ್ತು ಕಾಸ್ಮೆಟಿಕ್ ಕಾಯ್ದೆಗೆ ತಿದ್ದುಪಡಿ ತರಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಯಾವ ನಿರ್ಧಾರವನ್ನು ಪ್ರಕಟಿಸುತ್ತದೆ ಎಂಬ ಕುತೂಹಲ ಮೂಡಿದೆ.