ಮಂಗಳೂರು: ಗಾಂಜಾ ಸೇವನೆಯ ಮತ್ತಿನಲ್ಲಿ ತಡರಾತ್ರಿ ನಡು ರಸ್ತೆಯಲ್ಲೇ ಇಬ್ಬರು ಯುವಕರು ತಲವಾರು ಹಿಡಿದು ದಾಂಧಲೆ ನಡೆಸಿದ ಘಟನೆ ಮಂಗಳೂರು ನಗರದ ಬಜಿಲಕೇರಿ ಎಂಬಲ್ಲಿ ನಡೆದಿದೆ.
ತಲವಾರಿನೊಂದಿಗೆ ರಸ್ತೆಯಲ್ಲಿ ಕಿರುಚಾಡುತ್ತಾ ಬಂದು ಇನ್ನೊಂದು ಕೋಮಿನ ಮನೆಗೆ ನುಗ್ಗಲು ಯತ್ನಿಸಿದ್ದು, ಯಾವುದೇ ದ್ವೇಷ ಇಲ್ಲದೆ ಗಾಂಜಾದ ಅಮಲಿನಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ವೇಳೆ ಮೂವರು ಯುವಕರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ವಿಚಾರ ತಿಳಿದು ತಕ್ಷಣ ಸ್ಥಳೀಯ ಬಂದರು ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಈ ವೇಳೆ ಪೊಲೀಸರ ಎದುರೇ ಯುವಕರು ತಲವಾರು ಬೀಸಿ ಪೊಲೀಸರನ್ನೂ ಬೆದರಿಸುವ ಪ್ರಯತ್ನ ಮಾಡಿದ್ದಾರೆ. ಆ ಬಳಿಕ ಪೊಲೀಸರು ಇಬ್ಬರು ಯವಕರಿಂದ ಉಪಾಯದಿಂದ ಮಾರಕಾಸ್ತ್ರಗಳನ್ನು ಕಿತ್ತುಕೊಂಡು ನಂತರ ಬಂಧಿಸಿದ್ದಾರೆ. ಈ ಸಂಬಂಧ ಬಂದರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.