ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಭೆ ನಡೆದ ಪ್ರದೇಶದಲ್ಲಿ ಇನ್ನೂ ಎರಡು ದಿನ ನಿಷೇಧಾಜ್ಞೆಯನ್ನು ಮುಂದುವರಿಕೆ ಮಾಡಲಾಗಿದೆ.
ಡಿಜೆ ಹಳ್ಳಿ, ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಿಷೇಧಾಜ್ಞೆ ಮುಂದುವರಿಕೆ ಮಾಡಲಾಗಿದೆ. ಆಗಸ್ಟ್ 18ರ ಬೆಳಗ್ಗೆ 6 ಗಂಟೆಯವರೆಗೆ 144 ಸೆಕ್ಷನ್ ಜಾರಿ ಮಾಡಲಾಗಿದೆ. ಕಾವಲ್ ಭೈರಸಂದ್ರದಲ್ಲಿ ಕರ್ಫ್ಯೂ ಮತ್ತೆ ಜಾರಿಯಾದ ಹಿನ್ನೆಲೆಯಲ್ಲಿ ಪೊಲೀಸರು ಅಂಗಡಿಯನ್ನು ಮುಚ್ಚಿಸುತ್ತಿದ್ದಾರೆ. ಅಲ್ಲದೇ ಅನಗತ್ಯವಾಗಿ ಓಡಾಡುವವರಿಗೆ ಲಾಠಿ ಏಟು ಕೊಟ್ಟು ಮನೆಗೆ ಕಳುಹಿಸುತ್ತಿದ್ದಾರೆ.
ಡಿಸಿಪಿ ಶರಣಪ್ಪ ಅವರು ನಿಷೇಧಾಜ್ಞೆ ಜಾರಿಯಾದ ಏರಿಯಾಗಳಲ್ಲಿ ರೌಂಡ್ಸ್ ಹಾಕುತ್ತಿದ್ದು, ಗುಂಪು ಸೇರಿರುವವರನ್ನ ಮನೆಗೆ ಕಳುಹಿಸುತ್ತಿದ್ದಾರೆ. ಈ ವೇಳೆ ಮಾತನಾಡಿದ ಡಿಸಿಪಿ ಶರಣಪ್ಪ ಅವರು, ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ 52 ಪ್ರಕರಣ ದಾಖಲು ಮಾಡಲಾಗಿದೆ. ಸಿಸಿಟಿವಿ, ಮೊಬೈಲ್ ಮತ್ತು ಮಾಧ್ಯಮಗಳಲ್ಲಿ ಪ್ರಸಾರವಾದ ವಿಡಿಯೋಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗುತ್ತಿದೆ. ಇದುವರೆಗೂ ಸುಮಾರು 264 ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದ್ದು, ಆರೋಪಿಗಳನ್ನು ವಿಚಾರಣೆ ಮಾಡಲಾಗುತ್ತಿದೆ. ಇನ್ನೂ ಆರೋಪಿಗಳ ಸಂಖ್ಯೆ ಹೆಚ್ಚಾಗಬಹುದು ಎಂದು ತಿಳಿಸಿದರು.
ಘಟನೆ ನಡೆದ ಸ್ಥಳದಲ್ಲಿ ಇನ್ನೂ ಎರಡು ದಿನಗಳ ಕಾಲ ಕರ್ಫ್ಯೂ ಮುಂದುವರಿಸಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಸಾಕ್ಷಿ ಸಂಗ್ರಹಣೆ ನಡೆಸಲಾಗುತ್ತಿದೆ. ಆರೋಪಿ ನವೀನ್ ಮೊಬೈಲ್ ಪತ್ತೆ ವಿಚಾರಕ್ಕೆ ಸಂಬಂಧಿಸದಂತೆ ಫೋರೆನ್ಸಿಕ್ಸ್ ಕೆಲಸ ನಡೆಯುತ್ತಿದೆ. ಇನ್ನೂ ಆಸ್ತಿ ನಷ್ಟದ ಬಗ್ಗೆ ಎಕ್ಸ್ ಪರ್ಟ್ ತಂಡ ಜೊತೆ ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಮಾಹಿತಿ ನೀಡಿದರು.
ಕೆಜಿ ಹಳ್ಳಿಯಲ್ಲಿ ಕರ್ಫ್ಯೂ ಇದ್ದರೂ ಅನಗತ್ಯವಾಗಿ ಜನರು ರಸ್ತೆಗೆ ಬರುತ್ತಿದ್ದಾರೆ. ಹೀಗಾಗಿ ರಸ್ತೆಗೆ ಬಂದು ಅನಗತ್ಯವಾಗಿ ಅಡ್ಡಾಡುತ್ತಿದ್ದ ಮಹಿಳೆಯರಿಗೆ ಲಾಠಿ ಏಟು ಕೊಟ್ಟು ಮಹಿಳಾ ಪೊಲೀಸರು ಮನೆಗೆ ಕಳುಹಿಸುತ್ತಿದ್ದಾರೆ. ಅಲ್ಲದೇ ಮಹಿಳಾ ಪೊಲೀಸರು ಪ್ರತಿಯೊಂದು ವಾಹನಗಳನ್ನ ತಡೆದು ವಿಚಾರಿಸುತ್ತಿದ್ದಾರೆ. ಕೆಜಿ ಹಳ್ಳಿಯ ಟ್ಯಾನರಿ ರಸ್ತೆಯಲ್ಲಿ ನಾಲ್ಕು ಮಹಿಳಾ ಪೊಲೀಸರು ಸಖತ್ ಸೆಕ್ಯೂರಿಟಿ ಕೊಡುತ್ತಿದ್ದಾರೆ.