– ಸಂಘ ಮತ್ತು ಬಿಎಸ್‍ವೈ ಎರಡೂ ಒಂದೇ
ಬೆಂಗಳೂರು: ನಗರದ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಸಂಬಂಧ ಕ್ಲೈಮ್ ಕಮಿಷನ್ ನೇಮಕಕ್ಕೆ ಹೈಕೋರ್ಟಿಗೆ ಮನವಿ ಮಾಡಿಕೊಳ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವರು, ಹೈಕೋರ್ಟಿಗೆ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಸಂಬಂಧ ಕ್ಲೈಮ್ ಕಮಿಷನ್ ನೇಮಕ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಈಗಾಗಲೇ ಈ ಸಂಬಂಧ ಪ್ರಕ್ರಿಯೆ ಶುರು ಮಾಡಿದ್ದೇವೆ. ಕ್ಲೈಮ್ ಕಮಿಷನ್ ನೇಮಕವಾದರೆ ಅವರಿಗೆ ಎಲ್ಲ ಸಹಕಾರ ನೀಡುತ್ತೇವೆ. ಕಮಿಷನ್ ಮೂಲಕ ಘಟನೆಯಲ್ಲಿ ಉಂಟಾದ ಆಸ್ತಿಗಳ ನಷ್ಟ ಮೌಲ್ಯ ಪರಿಶೀಲಿಸಲಾಗುತ್ತೆ. ಆ ಬಳಿಕ ಆರೋಪಿಗಳಿಂದ ಎಷ್ಟು ದಂಡ ವಸೂಲು ಮಾಡಬೇಕೆಂಬ ಪ್ರಕ್ರಿಯೆ ಆರಂಭವಾಗುತ್ತೆ ಎಂದು ವಿವರಿಸಿದರು.
ಇದೇ ವೇಳೆ ಎನ್‍ಐಎ ಪ್ರಕಟಣೆ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ರಾಮಯ್ಯ ಕಾಲೇಜಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ)ಯಿಂದ ಒಬ್ಬ ವೈದ್ಯನ ಬಂಧನ ಆಗಿದೆ. ಈ ಬಗ್ಗೆ ಈಗಾಗಲೇ ಎನ್‍ಐಎ ಪ್ರಕಟಣೆ ಹೊರಡಿಸಿದೆ. ಈಗಾಗಲೇ ಎರಡು ಉಗ್ರ ಗುಂಪುಗಳ ಲಿಂಕ್ ಇರುವುದು ಬಹಿರಂಗ ಪಡಿಸಲಾಗಿದೆ. ದೇಶದ ವಿರುದ್ಧ ಕೆಲಸ ಮಾಡುತ್ತಿರುವ ಶಕ್ತಿಗಳ ವಿರುದ್ಧ ಜಂಟಿ ಕಾರ್ಯಾಚರಣೆ ಮುಂದುವರೆಯಲಿದೆ. ಎನ್‍ಐಎ ಜೊತೆ ನಮ್ಮ ಐಎಸ್‍ಡಿ ನಿರಂತರ ಸಂಪರ್ಕದಲ್ಲಿದ್ದಾರೆ. ನಾವು ಎನ್‍ಐಎ ಗೆ ಸಹಕಾರ ನೀಡುತ್ತಿದ್ದೇವೆ ಎಂದರು.
ಇದೇ ವೇಳೆ ಸಿಎಂ ಬಿಎಸ್‍ವೈ ಪದಚ್ಯುತಿಗೆ ಆರ್.ಎಸ್.ಎಸ್ ಹತ್ತಿರದ ನಾಯಕರಿಂದ ಸಂಚು ಎಂಬ ಸಿದ್ದರಾಮಯ್ಯ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಪಕ್ಷದಲ್ಲೇ ಒಳಗಿನ ವಾತಾವರಣ ಸೂಕ್ಷ್ಮವಾಗಿದೆ. ಆದ್ದರಿಂದ ಅವರು ಬಿಜೆಪಿ ಬಗ್ಗೆ ಅವರು ಮಾತಾಡೋದು ಬೇಡ. ಬಿಎಸ್‍ವೈ ಅವರು ಸಂಘದ ಹಿನ್ನೆಲೆಯಿಂದ ಬಂದವರು. ಸಂಘ ಮತ್ತು ಬಿಎಸ್‍ವೈ ಎರಡೂ ಒಂದೇ. ನಮ್ಮಲ್ಲಿ ವ್ಯತ್ಯಾಸಗಳು ಯಾವುದೂ ಇಲ್ಲ. ವ್ಯತ್ಯಾಸಗಳಿದ್ದರೆ ಅದು ಕಾಂಗ್ರೆಸ್‍ನಲ್ಲಿ ಮಾತ್ರ ಎಂದು ತಿರುಗೇಟು ನೀಡಿದರು.