ಗರ್ಲ್‍ಫ್ರೆಂಡ್ ಭೇಟಿಗೆ ಸಹಾಯ ಮಾಡಿ ಎಂದ ಭೂಪ- ತಕ್ಕ ಉತ್ತರ ನೀಡಿದ ನಟ ಸೋನು ಸೂದ್

Public TV
2 Min Read
sonu sood

ಮುಂಬೈ: ವಲಸೆ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಕಲ್ಪಿಸುವ ಮೂಲಕ ಬಾಲಿವುಡ್ ನಟ ಸೋನು ಸೂದ್ ಮಾನವೀಯತೆ ಮೆರೆದಿದ್ದರು. ಈ ಕುರಿತು ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು ಸಹ. ಆದರೆ ವ್ಯಕ್ತಿಯೊಬ್ಬ ಇದನ್ನೇ ದುರುಪಯೋಗಪಡಿಸಿಕೊಂಡು ತನ್ನ ಗರ್ಲ್‍ಫ್ರೆಂಡ್ ಭೇಟಿ ಮಾಡಲು ಸಹಾಯ ಮಾಡುವಂತೆ ಕೇಳಿಕೊಂಡಿದ್ದಾನೆ. ಇದಕ್ಕೆ ಸೋನು ಸೂದ್ ತಕ್ಕ ಉತ್ತರ ನೀಡಿದ್ದಾರೆ.

ಲಾಕ್‍ಡೌನ್ ಹಿನ್ನೆಲೆ ವಲಸೆ ಕಾರ್ಮಿಕರು ಪರದಾಡುವಂತಾಗಿದ್ದು, ಸಹಾಯ ಬೇಡುತ್ತಿದ್ದಾರೆ. ನಟ ಸೋನು ಸೂದ್ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿದ್ದು, ತಮ್ಮ ಅರಿವಿಗೆ ಬಂದ ಅಗತ್ಯವಿದ್ದವರಿಗೆ ಸಹಾಯ ಮಾಡುತ್ತಿದ್ದಾರೆ. ಅಲ್ಲದೆ ಅಭಿಮಾನಿಗಳ ಬಹುತೇಕ ಟ್ವೀಟ್‍ಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ.

Sonu sood A

ಇತ್ತೀಚೆಗೆ ಸೋನು ಸೂದ್ ನೂರಾರು ವಲಸೆ ಕಾರ್ಮಿಕರಿಗಾಗಿ ಬಸ್ ವ್ಯವಸ್ಥೆ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದರಲ್ಲಿ ಕರ್ನಾಟಕದ ಕಾರ್ಮಿಕರೂ ಸೇರಿದಂತೆ ಬಹುತೇಕರು ಮಹಾರಾಷ್ಟ್ರದ ಥಾಣೆಯಲ್ಲಿ ಸಿಲುಕಿದ್ದರು. ಇದನ್ನು ಕಂಡ ಸೋನು ಸೂದ್, ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರಗಳ ಜೊತೆ ಚರ್ಚಿಸಿ ಕಲಬುರಗಿಯಿಂದ ಮಹಾರಾಷ್ಟ್ರದ ಥಾಣೆಗೆ ಬಂದಿದ್ದ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಲು ಅನುಮತಿ ಪಡೆದಿದ್ದರು. ಅಲ್ಲದೆ ತಮ್ಮ ಸ್ವಂತ ಖರ್ಚಿನಲ್ಲಿ ಒಟ್ಟು ಹತ್ತು ಬಸ್‍ಗಳ ವ್ಯವಸ್ಥೆ ಮಾಡಿ ಥಾಣೆಯಿಂದ ಕಲಬುರಗಿಗೆ ತಾವೇ ಮುಂದೆ ನಿಂತು ಕಳುಹಿಸಿಕೊಟ್ಟಿದ್ದರು. ವಲಸೆ ಕಾರ್ಮಿಕರಿಗೆ ಊಟದ ಕಿಟ್‍ಗಳನ್ನು ನೀಡಿ ಕನ್ನಡಿಗರ ಬಗ್ಗೆ ಕಾಳಜಿ ತೋರಿದ್ದರು. ಈ ಮೂಲಕ ಮಾನವೀಯತೆ ಮೆರೆದಿದ್ದರು.

Sonu sood B

ಇದೀಗ ವ್ಯಕ್ತಿಯೊಬ್ಬ ಇದೇ ಅವಕಾಶವನ್ನು ಬಳಸಿಕೊಂಡು ಸೋನು ಸೂದ್ ಅವರ ಬಳಿ ಅನಗತ್ಯ ಸಹಾಯ ಕೇಳಿದ್ದಾನೆ. ಇದಕ್ಕೆ ನಟ ಸರಿಯಾಗಿಯೇ ಉತ್ತರ ನೀಡಿದ್ದಾರೆ. ಈ ಪ್ರಶ್ನೆ ಕೇಳಿದರೆ ನೀವೂ ನಗ್ತೀರಾ, ಹೌದು ಟ್ವಿಟ್ಟರ್‍ಲ್ಲಿ ವ್ಯಕ್ತಿಯೊಬ್ಬ ಈ ಪ್ರಶ್ನೆ ಕೇಳಿದ್ದು, ಭಯ್ಯಾ ಗರ್ಲ್‍ಫ್ರೆಂಡ್ ಭೇಟಿಯಾಗಲು ದಯವಿಟ್ಟು ನನಗೆ ಸಹಾಯ ಮಾಡಿ, ಬಿಹಾರಕ್ಕೆ ಮಾತ್ರ ಹೋಗಬೇಕಿದೆ ಎಂದು ಕೇಳಿದ್ದಾನೆ.

ಇದಕ್ಕೆ ನಟ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿ, ನಿಜವಾದ ಪ್ರೀತಿಯ ಕುರಿತು ಪಾಠ ಮಾಡಿದ್ದಾರೆ. ನಿಮ್ಮ ಗರ್ಲ್‍ಫ್ರೆಂಡ್ ಇಂದ ಕೆಲವು ದಿನವಾದರೂ ದೂರ ಇರಲು ಪ್ರಯತ್ನಿಸಿ, ಈ ಮೂಲಕ ನಿಮ್ಮ ನಿಜವಾದ ಪ್ರೀತಿಯ ಪರೀಕ್ಷೆಯೂ ಆಗುತ್ತದೆ ಎಂದು ಹಾಸ್ಯಮಯವಾಗಿ ಉತ್ತರಿಸಿದ್ದಾರೆ. ಸಾಲು ಮುಗಿದ ಮೇಲೆ ನಗುವಿನ ಎಮೋಜಿಯನ್ನು ಹಾಕಿದ್ದಾರೆ.

ಸೋನು ಸೂದ್ ಅವರ ಸಮಯ ಪ್ರಜ್ಞೆಯನ್ನು ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಊಹಿಸಲಾಗದ ಉತ್ತರಕ್ಕೆ ಫಿದಾ ಆಗಿದ್ದಾರೆ. ಕಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ಇತ್ತೀಚೆಗೆ ಇಂತಹದ್ದೇ ಮತ್ತೊಂದು ಘಟನೆ ನಡೆದಿತ್ತು. ಮದ್ಯದ ಅಂಗಡಿಗೆ ಹೋಗಲು ಸಹಾಯ ಮಾಡಿ ಎಂದು ಕೇಳಿದ್ದಕ್ಕೆ ನಟ ತಕ್ಕ ಉತ್ತರ ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *