ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇಂದು ಮಧ್ಯರಾತ್ರಿಯಿಂದ ಫಾಸ್ಟ್‌ಟ್ಯಾಗ್ ಕಡ್ಡಾಯ ಮಾಡಲಾಗಿದೆ. ಒಂದು ವೇಳೆ ಫಾಸ್ಟ್ ಟ್ಯಾಗ್ ಇಲ್ಲದೇ ಹೋದರೆ ಟೋಲ್‍ಗಳಲ್ಲಿ ಟೋಲ್ ಮೊತ್ತದ 2 ಪಟ್ಟು ಟೋಲ್ ಕಟ್ಟಬೇಕಾಗುತ್ತದೆ.
ಹೌದು. ಈಗಾಗಲೇ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸುವ ದಿನಾಂಕವನ್ನು ಹಲವು ಬಾರಿ ಮುಂದೂಡಿಕೆ ಮಾಡಲಾಗಿದ್ದು. ಇನ್ನು ಮುಂದೆ ಯಾವುದೇ ಕಾರಣಕ್ಕೂ ದಿನಾಂಕವನ್ನು ಮುಂದೂಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಖಡಕ್ ಆಗಿ ಹೇಳಿದ್ದಾರೆ.
ಈ ಮೊದಲು ಜನವರಿ 1 ರಿಂದ ಎಲ್ಲ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಅಳವಡಿಕೆಯನ್ನು ಕಡ್ಡಾಯ ಮಾಡಲಾಗಿತ್ತು. ಆದರೆ ಕೆಲ ವಾಹನ ಮಾಲೀಕರು ಫಾಸ್ಟ್ ಟ್ಯಾಗ್ ಅಳವಡಿಕೆ ಮಾಡದ ಕಾರಣ ಡೆಡ್‌ಲೈನ್ ದಿನಾಂಕ ಫೆ.15ಕ್ಕೆ ಮುಂದೂಡಲಾಗಿತ್ತು.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಪ್ರಾಧಿಕಾರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದಿದ್ದು, 2017ಕ್ಕಿಂತ ಹಿಂದಿನ ಹಾಗೂ ನಂತರದ ಎಲ್ಲಾ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯ ಮಾಡಲಾಗಿದೆ.
2017ರ ಡಿಸೆಂಬರ್ 1 ರಿಂದ ಮಾರಾಟವಾಗುವ ಎಲ್ಲ 4 ಚಕ್ರದ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯ ಮಾಡಲಾಗಿತ್ತು. 2017ಕ್ಕಿಂತ ಮೊದಲು ಮಾರಾಟವಾಗಿದ್ದ ವಾಹನಗಳಿಗೆ ವಿನಾಯಿತಿ ನೀಡಲಾಗಿತ್ತು. ಬಳಿಕ ಈ ವಿನಾಯಿತಿಯನ್ನುತೆಗೆದ ಸರ್ಕಾರ ಎಲ್ಲ 4 ಚಕ್ರದ ವಾಹನಗಳು ಕಡ್ಡಾಯವಾಗಿ ಫಾಸ್ಟ್‌ಟ್ಯಾಗ್ ಅಳವಡಿಸಿರಬೇಕೆಂದು ಸೂಚಿಸಿತ್ತು. ಇದನ್ನೂ ಓದಿ: ಮುಂದಿನ 2 ವರ್ಷದಲ್ಲಿ ಟೋಲ್ ಪ್ಲಾಜಾಗಳಿಂದ ಮುಕ್ತವಾಗಲಿದೆ ಭಾರತ
ಏಪ್ರಿಲ್ 2021 ರಿಂದ ಥರ್ಡ್ ಪಾರ್ಟಿ ವಿಮೆ ಮಾಡಿಸಬೇಕಿದ್ದರೂ ಫಾಸ್ಟ್‌ಟ್ಯಾಗ್ ಕಡ್ಡಾಯ. ಇದರ ಜೊತೆ ಹಳೆ ವಾಹನಗಳ ಫಿಟ್‌ನೆಸ್ ಸರ್ಟಿಫಿಕೇಟ್ ನವೀಕರಣಕ್ಕೂ ಫಾಸ್ಟ್ ಟ್ಯಾಗ್ ಅಳವಡಿಸಿರಬೇಕು.
ಫಾಸ್ಟ್‌ಟ್ಯಾಗ್ ಇದ್ದರೆ ವಾಹನಗಳು ಸರಾಗವಾಗಿ ಟೋಲ್ ಪ್ಲಾಜಾಗಳಲ್ಲಿ ಸಂಚರಿಸುತ್ತದೆ. ಸಮಯ ಮತ್ತು ಇಂಧನ ಉಳಿತಾಯವಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ. 2019ರ ಅಕ್ಟೋಬರ್ 1 ರಿಂದ ರಾಷ್ಟ್ರೀಯ ಪರ್ಮಿಟ್ ಹೊಂದಿರುವ ಎಲ್ಲ ವಾಹನಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ.
ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಿರುವ ಕಾರಣ ಟೋಲ್ ಸಂಗ್ರಹ ಈಗ ಹೆಚ್ಚಾಗುತ್ತಿದೆ. 2019ರಲ್ಲಿ ಒಂದು ದಿನದಲ್ಲಿ 70 ಕೋಟಿ ರೂ. ಸಂಗ್ರಹವಾಗಿದ್ದರೆ 2020ರಲ್ಲಿ ಇದು 92 ಕೋಟಿ ರೂಗಳಿಗೆ ಏರಿಕೆಯಾಗಿದೆ.