ಯಾದಗಿರಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಸುಸಜ್ಜಿತ ವ್ಯವಸ್ಥೆಗಾಗಿ ಸರ್ಕಾರ ಕೋಟಿ ಕೋಟಿ ಖರ್ಚು ಮಾಡುತ್ತಿದೆ. ಆದರೆ ಈ ಜಿಲ್ಲೆಯಲ್ಲಿ ಮಾತ್ರ ಇದ್ಯಾವುದೂ ಲೆಕ್ಕಕ್ಕೆ ಇಲ್ಲ. ಈ ಆಸ್ಪತ್ರೆಗೆ ಕೊರೊನಾ ಸೋಂಕಿತರು ಬಂದರೆ ಗುಣಮುಖರಾಗುವ ಬದಲು, ಇನ್ನೂ ಜಾಸ್ತಿ ಕೊರೊನಾ ಪ್ರಮಾಣವನ್ನು ಹೆಚ್ಚಿಸಿಕೊಳ್ಳೊದು ಪಕ್ಕಾ ಅನ್ನೋವಂತಿದೆ.
Advertisement
ವಿಶ್ವದಲ್ಲಿ ತಾಂಡವಾಡುತ್ತಿರುವ ಕೊರೊನಾ ಎಂಬ ಮಹಾಮಾರಿಗೆ ಇಡೀ ಜನಜೀವನವೇ ತಲ್ಲಣಗೊಂಡಿದೆ. ದೇಶದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಇದಕ್ಕೆ ಗಿರಿನಾಡು ಯಾದಗಿರಿಯೂ ಹೊರತಾಗಿಲ್ಲ. ಎಲ್ಲದರಲ್ಲೂ ಯಾದಗಿರಿ ಸದಾ ಹಿಂದುಳಿದ ಜಿಲ್ಲೆಯಾಗಿತ್ತು. ಆದರೆ ಕೊರೊನಾ ಸೋಂಕಿತರ ಪ್ರಕರಣದಲ್ಲಿ ಮಾತ್ರ ರಾಜ್ಯಕ್ಕೆ ಮೂರನೇ ಸ್ಥಾನ ಪಡೆಯುವ ಮೂಲಕ ಯಾದಗಿರಿ ಕೊರೊನಾ ಹಾಟ್‍ಸ್ಪಾಟ್ ಎನಿಸಿದೆ.
Advertisement
Advertisement
ಇನ್ನು ಕೊರೊನಾ ರೋಗಿಗಳಿಗೆ ಸಂಜೀವಿನಿಯಾಗಿ ಸಿಕ್ಕಿರುವುದು ಕೋವಿಡ್ ಆಸ್ಪತ್ರೆಗಳು. ಆದರೆ ಯಾದಗಿರಿಯಲ್ಲಿ ಈ ಆಸ್ಪತ್ರೆಯ ಪರಿಸ್ಥಿತಿ ಹೇಗಿದೆ ಅಂದರೆ ಇಲ್ಲಿ ರೋಗ ಗುಣವಾಗುವ ಮಾತಿರಲಿ, ಜಾಸ್ತಿಯಾಗದಿದ್ದರೆ ಸಾಕು ಎಂದು ಜಿಲ್ಲೆಯ ಸೋಂಕಿತರು ಬೇಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ.
Advertisement
ಎಲ್ಲೆಂದರಲ್ಲಿ ಬಿದ್ದಿರುವ ಮಾಸ್ಕ್ ಗಳು ಕಸದ ರಾಶಿಯಂತೆ ಕಾಣುತ್ತಿರುವ ಪಿಪಿಇ ಕಿಟ್‍ಗಳು ಇದು ಯಾದಗಿರಿಯಲ್ಲಿನ ಕೊವಿಡ್ ಆಸ್ಪತ್ರೆಗಳ ದುಸ್ಥಿತಿ. ಕೊರೊನಾದಿಂದ ಕಂಗಾಲಾಗಿರುವ ರೋಗಿಗಳ ಚಿಕಿತ್ಸೆಗಾಗಿ ಬಹುಕೋಟಿ ವೆಚ್ಚದಲ್ಲಿ ಈ ಆಸ್ಪತ್ರೆಯನ್ನು ಆರಂಭಿಸಲಾಗಿದೆ. ಇಲ್ಲಿ ಸದ್ಯ 300ಕ್ಕೂ ಅಧಿಕ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಈ ಆಸ್ಪತ್ರೆಯಲ್ಲಿ ಸ್ವಚ್ಛತೆ ಎನ್ನುವುದು ಮರೀಚಿಕೆಯಾಗಿದ್ದು, ರೋಗ ಹರಡುವ ಭೀತಿ ಹೆಚ್ಚಾಗಿದೆ.
ಕೋವಿಡ್ ಆಸ್ಪತ್ರೆಯಲ್ಲಿ ಎಲ್ಲಿಯೂ ಸಹ ಸ್ವಚ್ಛತೆ ಕಾಣುತ್ತಿಲ್ಲ. ಕಂಡ ಕಂಡಲ್ಲಿ ರೋಗಿಗಳು ಮತ್ತು ವೈದ್ಯರು ಬಳಸಿದ ಮಾಸ್ಕ್, ಪಿಪಿಇ ಕಿಟ್ ಬಿಸಾಡಲಾಗಿದೆ. ಪಾಸಿಟಿವ್ ರೋಗಿಗಳಿಗೆ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿ ರೋಗ ವಾಸಿಯಾಗುವುದಕ್ಕಿಂತ ಹರಡುವ ಸಾಧ್ಯತೆಯೆ ಹೆಚ್ಚಾಗಿ ಬಿಟ್ಟಿದೆ. ರೋಗಿಗಳು, ವೈದ್ಯರು, ನರ್ಸ್ ಗಳು ಉಪಯೋಗಿಸಿದ ಮಾಸ್ಕ್ ಆಸ್ಪತ್ರೆ ಕಾರಿಡಾರ್‍ನಲ್ಲಿ ಬಿದ್ದಿವೆ. ಇನ್ನೂ ಉಪಯೋಗವಾಗದ ಪಿಪಿಇ ಕಿಟ್ ರಾಶಿ ರಾಶಿ ಬಿದ್ದಿದ್ದು, ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಅವಲೋಕನಾ ಅವಧಿಯಲ್ಲಿರುವ ಸೋಂಕಿತರು ಊಟಕ್ಕೆ ಪರಿತಪಿಸುವಂತಾಗಿದೆ. ಜಿಲ್ಲೆಯ ಬಂದಳ್ಳಿ ಸಮೀಪದ ಏಕಲವ್ಯ ವಸತಿ ಶಾಲೆ ಮತ್ತು ಬಿ ಗುಡಿಯಲ್ಲಿ ಸ್ಥಾಪಿಸಿರುವ ಕೋವಿಡ್ ಸೆಂಟರ್ ನಲ್ಲಿ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಊಟ ನೀಡುತ್ತಿಲ್ಲ ಮತ್ತು ಜಿಲ್ಲಾಡಳಿತ ಸೋಂಕಿತರ ಹೊಟ್ಟೆಗೆ ಅರ್ಧಂಬರ್ಧ ಊಟ ಹಾಕಿ ಕೈತೊಳೆದು ಕೊಳ್ಳುತ್ತಿದೆಂಬ ಗಂಭೀರ ಆರೋಪ ಕೇಳಿ ಬಿರುತ್ತಿವೆ. ಇದರ ನಡುವೆ ಸೋಂಕಿತರು ಮತ್ತು ಪ್ರಥಮ ಸಂಪರ್ಕ ವ್ಯಕ್ತಿಗಳು, ಕೋವಿಡ್ ಸೆಂಟರ್‍ನಲ್ಲಿ ಗದ್ದಲ ಶುರುಮಾಡಿದ್ದಾರೆ.
ಒಟ್ಟಿನಲ್ಲಿ ಸೋಂಕಿತರನ್ನು ಶೀಘ್ರ ಗುಣಮುಖರನ್ನಾಗಿಸಿ ಮಹಾಮಾರಿ ಕೊರೊನಾ ಆರ್ಭಟಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಬೇಕಿತ್ತು. ಆದರೆ ಈಗ ಚಿಕಿತ್ಸೆ ನೀಡುವ ಸ್ಥಳವೇ ಸ್ವಚ್ಚತೆಯಿಲ್ಲದೇ ಆಸ್ಪತ್ರಗೆ ಅನಾರೋಗ್ಯ ಬಡಿದಿದೆ.