ಲಕ್ನೋ: ಸೆಲ್ಫಿ ಹುಚ್ಚಿನಿಂದಾಗಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಇಷ್ಟಾದರೂ ಜನ ಎಚ್ಚೆತ್ತುಕೊಳ್ಳುತ್ತಿಲ್ಲ. ಅದೀಗ ಸೆಲ್ಫಿ ತೆಗೆದುಕೊಳ್ಳುವಾಗ ಮಹಿಳೆ ಅಚಾನಕ್ಕಾಗಿ ತನಗೆ ತಾನೇ ಗುಂಡು ಹಾರಿಸಿಕೊಂಡಿದ್ದು, ಸಾವನ್ನಪ್ಪಿದ್ದಾಳೆ.
ಉತ್ತರ ಪ್ರದೇಶದ ಲಕ್ನೋದಲ್ಲಿ ಘಟನೆ ನಡೆದಿದ್ದು, 26 ವರ್ಷದ ನವ ವಿವಾಹಿತೆ ರಾಧಿಕಾ ಗುಪ್ತಾ ತನ್ನ ಮಾವನ ಸಿಂಗಲ್ ಬ್ಯಾರಲ್ ಗನ್ ಹಿಡಿದು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಅಚಾನಕ್ಕಾಗಿ ತನಗೆ ತಾನೇ ಗುಂಡು ಹಾರಿಸಿಕೊಂಡಿದ್ದಾಳೆ. ಗನ್ ಲೋಡ್ ಆಗಿದ್ದು, ಇದನ್ನು ತಿಳಿಯದ ರಾಧಿಕಾ ಗುಪ್ತಾ, ಟ್ರಿಗರ್ ಮೇಲೆ ತನ್ನ ಬೆರಳು ಇಟ್ಟು ಸೆಲ್ಫಿಗೆ ಪೋಸ್ ನೀಡಿದ್ದಾಳೆ. ಆದರೆ ಅಚಾನಕ್ಕಾಗಿ ಟ್ರಿಗರ್ ಒತ್ತಿದ್ದು, ಪರಿಣಾಮ ಗುಂಡು ಹಾರಿದೆ.
Advertisement
Advertisement
ಗುಂಡು ರಾಧಿಕಾ ಗುಪ್ತಾಳ ಗಂಟಲು ಹೊಕ್ಕಿದ್ದು, ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಮಾರ್ಗಮಧ್ಯೆದಲ್ಲೇ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.
Advertisement
ಘಟನೆ ಸಂಬಂಧ ರಾಧಿಕಾ ಗುಪ್ತಾ ಮಾವ ರಾಜೇಶ್ ಗುಪ್ತಾ ಪ್ರತಿಕ್ರಿಯಿಸಿದ್ದು, ರಾಧಿಕಾ ಮೇ 2021ರಲ್ಲಿ ನನ್ನ ಮಗ ಆಕಾಶ್ ಗುಪ್ತಾ ಜೊತೆ ವಿವಾಹವಾಗಿದ್ದಳು ಎಂದು ತಿಳಿಸಿದ್ದಾರೆ. ಘಟನೆಯಿಂದ ಆತಂಕಗೊಂಡಿರುವ ಮಹಿಳೆಯ ತಂದೆ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Advertisement
ನಾವು ನಗರದಲ್ಲಿ ಸಣ್ಣ ಜ್ಯೂವೆಲರಿ ಅಂಗಡಿ ನಡೆಸುತ್ತಿದ್ದೇವೆ. ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ನನ್ನ ಮಗ ಆಕಾಶ್ 12 ಬೋರ್ ನ ಸಿಂಗಲ್ ಬ್ಯಾರಲ್ ಗನ್‍ನ್ನು ಮರಳಿ ಮನೆಗೆ ತಂದಿದ್ದ. ಪಂಚಾಯಿತಿ ಚುನಾವಣೆ ವೇಳೆ ಇದನ್ನು ನಾವು ಸ್ಥಳೀಯ ಪೊಲೀಸ್ ಠಾಣೆಗೆ ನೀಡಿದ್ದೆವು. ಇದೀಗ ಗನ್‍ನ್ನು ಮರಳಿ ಮನೆಗೆ ತಂದು 2ನೇ ಮಹಡಿಯ ರೂಂನಲ್ಲಿ ಇರಿಸಿದ್ದೆವು. ಇದನ್ನು ಹಿಡಿದು ರಾಧಿಕಾ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಳು ಎಂದು ರಾಜೇಶ್ ಗುಪ್ತಾ ವಿವರಿಸಿದ್ದಾರೆ.
ಸಂಜೆ 4ಗಂಟೆ ಸುಮಾರಿಗೆ ಗುಂಡು ಹಾರಿದ ಶಬ್ದ ಕೇಳಿಸಿತು. ಬಳಿಕ ಗನ್ ಇದ್ದ ಜಾಗಕ್ಕೆ ಹೋದೆವು. ರಾಧಿಕಾಗೆ ಗುಂಡು ತಗುಲಿರುವುದು ಕಾಣಿಸಿತು. ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಿದೆವು. ಬಳಿಕ ಮೊಬೈಲ್ ಸೆಲ್ಫಿ ಕ್ಯಾಮೆರಾ ಓಪನ್ ಇರುವ ಸ್ಥಿತಿಯಲ್ಲಿ ಪತ್ತೆಯಾಯಿತು ಎಂದು ತಿಳಿಸಿದ್ದಾರೆ.
ಶಹಬಾದ್ ಎಸ್‍ಎಚ್‍ಒ ಶಿವಶಂಕರ್ ಸಿಂಗ್ ಈ ಕುರಿತು ಪ್ರತಿಕ್ರಿಯಿಸಿ, 12 ಬೋರ್ ನ ಸಿಂಗಲ್ ಬ್ಯಾರಲ್ ಗನ್ ಹಾಗೂ ಸಂತ್ರಸ್ತೆಯ ಮೊಬೈಲ್ ವಶಪಡಿಸಿಕೊಂಡಿದ್ದೇವೆ. ಫೊರೆನ್ಸಿಕ್ ಪರೀಕ್ಷೆಗೆ ಕಳುಹಿಸಿದ್ದೇವೆ. ಗನ್ ಜೊತೆ ಸಂತ್ರಸ್ತೆ ಇರುವ ಫೋಟೋ ಸಹ ಸಿಕ್ಕಿದೆ. ಅವಳು ಸಾಯುವುದಕ್ಕೂ ಕೆಲಸ ಸೆಕೆಂಡುಗಳ ಮುಂಚೆ ಈ ಫೋಟೋ ಕ್ಲಿಕ್ಕಿಸಲಾಗಿದೆ. ಮೃತ ದೇಹವನ್ನು ಪೋಸ್ಟ್‍ಮಾರ್ಟಮ್‍ಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಪತಿ ಆಕಾಶ್ ಅವರನ್ನೂ ವಿಚಾರಣೆಗೊಳಪಡಿಸಿದ್ದು, ನನ್ನ ಪತ್ನಿ ರಾಧಿಕಾ ಗುಪ್ತಾ ಗನ್ ನೋಡಲು ತುಂಬಾ ಉತ್ಸುಕಳಾಗಿದ್ದಳು. ಅವಳಾಗಲೇ ಗನ್ ಜೊತೆ ಫೋಟೋ ತೆಗೆದುಕೊಂಡಿದ್ದಳು. ಆದರೆ ಇನ್ನೂ ಹೆಚ್ಚು ಬೇಕೆಂದು ತೆಗೆಯಲು ಮುಂದಾಗಿದ್ದಳು. ಹೀಗೆ ಸೆಲ್ಫಿ ತೆಗೆದುಕೊಳ್ಳುವಾಗ ಟ್ರಿಗರ್ ಒತ್ತಿದ್ದು, ಬಳಿಕ ಗುಂಡು ಹಾರಿದೆ ಎಂದು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.