ಚಿಕ್ಕಮಗಳೂರು: ಕಾಡೆಮ್ಮೆಯನ್ನ ಕೂಗಿ-ಕೂಗಿ ಕರೆದ ಗ್ರಾಮಸ್ಥರು ಕಾಡೆಮ್ಮೆ ಗ್ರಾಮದೊಳಗೆ ಬರುತ್ತಿದ್ದಂತೆ ಭಯಗೊಂಡು ಅಂಗಡಿಯೊಳಗೆ ಹೋಗಿ ರೋಲಿಂಗ್ ಶಟರ್ ಎಳೆದುಕೊಂಡ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಕೂಳೂರು ಗ್ರಾಮದಲ್ಲಿ ನಡೆದಿದೆ.
ಜಯಪುರ ಸಮೀಪದ ಕೂಳುರು, ಧರೆಕೊಪ್ಪ ಭಾಗದಲ್ಲಿ ಕಳೆದ ಎರಡ್ಮೂರು ದಿನಗಳಿಂದ ಕಾಡೆಮ್ಮೆಯೊಂದು ಬೀಡು ಬಿಟ್ಟಿತ್ತು. ಆಗಾಗ ಗ್ರಾಮಸ್ಥರ ಕಣ್ಣಿಗೂ ಬೀಳುತ್ತಿತ್ತು. ಗ್ರಾಮದ ಬಳಿ ಕಾಡೆಮ್ಮೆ ಆಗಾಗ ಕಂಡು ಕಾಡಂಚಿನಲ್ಲಿ ಮರೆಯಾಗುತ್ತಿತ್ತು. ಆದರೆ ಇಂದು ಕೂಳೂರು ಗ್ರಾಮದ ಗದ್ದೆ ಬದಿಯಲ್ಲಿ ನಿಂತಿದ್ದ ಕಾಡೆಮ್ಮೆಯನ್ನ ಸ್ಥಳೀಯರು ಕೂಗಿ-ಕೂಗಿ ಕರೆದಿದ್ದಾರೆ.
ಸ್ಥಳೀಯರು ಕೂಗುತ್ತಿದ್ದಂತೆ ಗದ್ದೆ ಬದಿಯಿಂದ ಅತಿಥಿಯಂತೆ ಕಾಡೆಮ್ಮೆ ನೇರವಾಗಿ ಗದ್ದೆಗಳನ್ನ ದಾಟಿ ಗ್ರಾಮದೊಳಕ್ಕೆ ಎಂಟ್ರಿ ಕೊಟ್ಟಿದೆ. ಕರೆದ ಕೂಡಲೇ ಕಾಡೆಮ್ಮೆ ನೇರ ಗ್ರಾಮದೊಳಕ್ಕೆ ಬಂದಿದ್ದನ್ನು ಕಂಡು ಸ್ಥಳೀಯರು ಭಯದಿಂದ ಓಡಿ ಹೋಗಿದ್ದಾರೆ. ಅಂಗಡಿ ಬಾಗಿಲಲ್ಲಿದ್ದ ಯುವಕರು ಅಂಗಡಿಯೊಳಕ್ಕೆ ಹೋಗಿ ರೋಲಿಂಗ್ ಶಟರ್ ಎಳೆದುಕೊಂಡಿದ್ದಾರೆ.
ಗ್ರಾಮದೊಳಗೆ ಬಂದ ಕಾಡೆಮ್ಮೆ ಅಲ್ಲಿಂದ ಮತ್ತೆ ಕಾಡಂಚಿನಲ್ಲಿ ಕಣ್ಮರೆಯಾಗಿದೆ. ದೈತ್ಯ ಕಾಡೆಮ್ಮೆ ಕರೆದ ಕೂಡಲೇ ಬಂದಿದ್ದನ್ನು ಕಂಡು ಸ್ಥಳೀಯರು ಆತಂಕ ಹಾಗೂ ಆಶ್ಚರ್ಯಕ್ಕೀಡಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡೆಮ್ಮೆ ಹಾವಳಿ ಹೆಚ್ಚಾಗಿದೆ. ಕಳೆದ ನಾಲ್ಕೈದು ದಿನಗಳ ಹಿಂದೆ ಚಿಕ್ಕಮಗಳೂರು ನಗರದ ಅಂಚಿಗೂ ಬಂದಿದ್ದ ಕಾಡೆಮ್ಮೆ ಗ್ರಾಮಗಳ ಮಧ್ಯೆ ರಾಜಾರೋಷವಾಗಿ ಓಡಾಡಿತ್ತು. ಇದನ್ನ ಕಂಡ ಸ್ಥಳೀಯರು ತೀವ್ರ ಆತಂಕಕ್ಕೀಡಾಗಿದ್ದರು.
ಮಲೆನಾಡು ಭಾಗದಲ್ಲಿ ಹಲವು ಕಾಡಂಚಿನ ಗ್ರಾಮಗಳಲ್ಲಿ ಕಾಡೆಮ್ಮೆ ಕಾಟ ಮಿತಿಮೀರಿದೆ. ಇಂದು ಕೂಡ ಕರೆದ ಕೂಡಲೇ ಗ್ರಾಮಕ್ಕೆ ಎಂಟ್ರಿ ಕೊಟ್ಟ ಕಾಡೆಮ್ಮೆಯನ್ನು ಕಂಡು ಸ್ಥಳೀಯರಿಗೆ ಅಚ್ಚರಿ ಜೊತೆ ಭಯ ತರಿಸಿದೆ. ಕರೆದ ಕೂಡಲೇ ಬಂದ ಕಾಡೆಮ್ಮೆ ಕಂಡು ಕಾಡೆಮ್ಮೆಗಳು ನಗರ ಪ್ರದೇಶಗಳಿಗೆ ಹೊಂದಿಕೊಳ್ಳುತ್ತಿವೆಯಾ? ಮುಂದಿನ ದಿನಗಳಲ್ಲಿ ಕಾಡೆಮ್ಮೆಗಳು ಗ್ರಾಮಗಳಿಗೆ ಬರುವ ಸಂಖ್ಯೆ ಕೂಡ ಹೆಚ್ಚಾಗಲಿದ್ಯಾ ಎಂಬ ಅನುಮಾನ ಮಲೆನಾಡಿಗರನ್ನ ಕಾಡಲಾರಂಭಿಸಿದೆ.