ಧಾರವಾಡ: ಜಾತಿ, ಧರ್ಮದ ಹೆಸರಿನಲ್ಲಿ ಅದೆಷ್ಟು ಯುದ್ಧಗಳು ನಡೆದಿವೆಯೋ ಗೊತ್ತಿಲ್ಲ. ಅದೆಷ್ಟು ಗಲಭೆಗಳು ನಡೆದಿವೆಯೋ ಗೊತ್ತಿಲ್ಲ. ಆದರೆ ಇಲ್ಲೊಬ್ಬರು ವ್ಯಕ್ತಿ ಹಿಂದೂ ಧರ್ಮದ ಹಬ್ಬದ ಜೊತೆಗೆ ಮುಸ್ಲಿಂ ಧರ್ಮದ ಹಬ್ಬವನ್ನು ಆಚರಣೆ ಮಾಡುತ್ತಾ ಬಂದಿದ್ದಾರೆ.
ಧಾರವಾಡ ನಗರದ ಮೇದಾರ ಓಣಿಯ ಸುಧೀರ ಮುಧೋಳ ಅವರು ಗಣಪತಿ ಹಬ್ಬವನ್ನು ಬಹಳ ವಿಭಿನ್ನವಾಗಿ ಆಚರಣೆ ಮಾಡುತ್ತಾರೆ. ಹಿಂದೂ ಧರ್ಮದವರಾದರೂ ಮೊಹರಂ ಹಬ್ಬವನ್ನೂ ಅಷ್ಟೇ ವಿಭಿನ್ನವಾಗಿ ಆಚರಣೆ ಮಾಡುತ್ತಾರೆ. ಇದೇನಪ್ಪ ಹಿಂದೂ ಆಗಿ ಮೊಹರಂ ಹಬ್ಬ ಆಚರಣೆ ಮಾಡುತ್ತಾರಾ ಎಂದು ನೀವು ಪ್ರಶ್ನೆ ಮಾಡಿದರೆ ತಪ್ಪೇನಿಲ್ಲ. ಕಳೆದ 40 ವರ್ಷಗಳಿಂದ ಮುಧೋಳ ಅವರ ಕುಟುಂಬ ಈ ಗಣಪತಿ ಹಾಗೂ ಮೊಹರಂ ಹಬ್ಬವನ್ನು ವಿಶಿಷ್ಟವಾಗಿ ಆಚರಣೆ ಮಾಡುತ್ತಾ ಬಂದಿದ್ದಾರೆ.
ಸುಧೀರ್ ಅವರ ತಂದೆ ಮೊದಲು ಮುಸ್ಲಿಂ ಸಮುದಾಯದ ಪಾಂಜಾಗಳು ಪ್ರತಿಷ್ಠಾಪನೆಗೊಳ್ಳುವ ಜಾಗವನ್ನು ಖರೀದಿ ಮಾಡಿದ್ದರು. ಖರೀದಿ ಮಾಡಿದ ಜಾಗದಲ್ಲಿ ಮನೆ ಕಟ್ಟಿಸಿದ ಬಳಿಕವೂ ಮುಸ್ಲಿಂ ಸಂಪ್ರದಾಯದಂತೆ ತಮ್ಮ ಮನೆಯಲ್ಲಿಯೇ ಪಾಂಜಾಗಳನ್ನು ಪ್ರತಿಷ್ಠಾಪನೆ ಮಾಡಿದ್ದರು. ಅದಕ್ಕೆ ಮುಸ್ಲಿಂ ಸಂಪ್ರದಾಯದಂತೆ ಪೂಜೆ ಸಲ್ಲಿಸುತ್ತ ಬಂದಿದ್ದಾರೆ. ಮೊಹರಂ ವೇಳೆಯೇ ಮೂರು ವರ್ಷಕ್ಕೊಮ್ಮೆ ಗಣೇಶ ಚತುರ್ಥಿ ಬರುವುದರಿಂದ ಪಾಂಜಾಗಳನ್ನು ಪ್ರತಿಷ್ಠಾಪನೆ ಮಾಡುವ ಜಾಗದ ಪಕ್ಕವೇ ಗಣೇಶನ ಮೂರ್ತಿಯನ್ನೂ ಪ್ರತಿಷ್ಠಾಪನೆ ಮಾಡಿ ಈ ಕುಟುಂಬ ಪೂಜೆ ಸಲ್ಲಿಸುತ್ತಿದೆ.
ಇದರಿಂದ ಒಂದೇ ಮನೆಯಲ್ಲಿ ರಾಮನೂ, ರಹೀಮನೂ ನೆಲೆಸುವಂತಾಗಿದೆ. ಕಳೆದ 40 ವರ್ಷಗಳಿಂದ ತಮ್ಮ ಮನೆಯಲ್ಲಿ ಪಾಂಜಾಗಳನ್ನು ಪ್ರತಿಷ್ಠಾಪನೆ ಮಾಡಿ, ಗಣೇಶನನ್ನೂ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸುತ್ತಿದ್ದಾರೆ. ಈ ಮೂಲಕ ಸಮಾಜಕ್ಕೆ ಒಂದು ಭಾವೈಕ್ಯತೆಯ ಸಂದೇಶ ಸಾರುತ್ತಿದ್ದಾರೆ. ತಮ್ಮ ತಂದೆಯ ತರುವಾಯ ತಾವೇ ಪಾಂಜಾಗಳನ್ನು ಪ್ರತಿಷ್ಠಾಪನೆ ಮಾಡುವ ಕಾರ್ಯ ಮಾಡುತ್ತಿದ್ದಾರೆ.