-30 ದಿನದಲ್ಲಿ ನೂತನ ನಿಯಮ ಜಾರಿ
-ಸ್ಥಳೀಯವಾಗಿಯೇ ಅದಿರು ಬಳಸಲು ಚಿಂತನೆ
-ಅಧಿಕಾರಿಗಳಿಗೆ ಅನಾಹುತ ತಡೆಗಟ್ಟಲು ತರಬೇತಿ
ಧಾರವಾಡ: ಗಣಿಗಾರಿಕೆ ನಡೆಸುವ ಉದ್ಯಮಿಗಳಿಗೆ ಶೀಘ್ರದಲ್ಲಿ ಲೈಸೆನ್ಸ್(ಪರಾವನಗಿ) ನೀಡಲು ಅನುಕೂಲವಾಗುವಂತೆ ಆನ್‍ಲೈನ್ ಮತ್ತು ಆಫ್‍ಲೈನ್ ವ್ಯವಸ್ಥೆಯನ್ನು ಜಾರಿ ಮಾಡಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರಾಣಿ, ಆಫ್‍ಲೈನ್, ಆನ್‍ಲೈನ್ ಜಾರಿ ಮಾಡಿದರೆ 30 ದಿನದಲ್ಲಿ ಗಣಿಗಾರಿಕೆ ಲೈಸೆನ್ಸ್ ಪಡೆಯಬಹುದು, 30 ದಿನದೊಳಗೆ ಈ ಎರಡೂ ವ್ಯವಸ್ಥೆಯನ್ನು ಇಲಾಖೆ ಜಾರಿಗೆ ತರಲಿದೆ. ಈಗಾಗಲೇ ಕರಡು ನೀತಿ ಸಿದ್ಧವಾಗಿದ್ದು, ಗಣಿಗಾರಿಕೆ ಅನುಮತಿ ಪಡೆಯುವವರೆಗೆ ತೊಂದರೆಯಾಗದಂತೆ ಸರಳೀಕರಣ ಮಾಡುವುದು ಇದರ ಮುಖ್ಯ ಉದ್ದೇಶ ಎಂದು ಹೇಳಿದರು.
ಅದಿರನ್ನು ಹೊರಗಿನಿಂದ ಆಮದು ಮಾಡಿಕೊಳ್ಳುವುದಕ್ಕೆ ಹೆಚ್ಚಿನ ಆರ್ಥಿಕ ಹೊರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಇಲ್ಲಿನ ಅದಿರನ್ನು ಬಳಕೆ ಮಾಡಲು ಚಿಂತನೆ ನಡೆಸಲಾಗಿದ್ದು, ಈಗಾಗಲೇ ಜಿಂದಾಲ್, ಬಲ್ಡೋಟಾ, ಕಿರ್ಲೋಸ್ಕರ್ ಸೇರಿದಂತೆ ದೊಡ್ಡ ದೊಡ್ಡ ಕಂಪನಿಗಳ ಜೊತೆ ಸಭೆ ನಡೆಸಲಾಗಿದೆ. ಹೊರಗಡೆಯಿಂದ ಅದಿರು ಆಮದು ಮಾಡಿಕೊಂಡರೆ ಉಂಟಾಗಬಹುದಾದ ಆರ್ಥಿಕ ಹೊರೆಯನ್ನು ತಗ್ಗಿಸಬಹುದಾಗಿದೆ ಎಂದು ಮಾಹಿತಿ ಹಂಚಿಕೊಂಡರು.
ಈಗಾಗಲೇ ಅದಿರಿನ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಚರ್ಚೆ ನಡೆಸಲಾಗಿದೆ. ಅವರು ಕೂಡ ಸ್ಥಳೀಯ ಸಂಪನ್ಮೂಲವನ್ನು ಬಳಸಿಕೊಳ್ಳಲು ಸೂಚನೆ ಕೊಟ್ಟಿದ್ದಾರೆ. ಸದ್ಯದಲ್ಲೇ ಮತ್ತೊಮ್ಮೆ ಅಕಾರಿಗಳ ಸಭೆ ಕರೆದು ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಪದೇ ಪದೇ ಉಂಟಾಗುತ್ತಿರುವ ಅವಘಡಗಳನ್ನು ತಪ್ಪಿಸಲು ಇಲಾಖೆ ಗಂಭೀರ ಚಿಂತನೆ ನಡೆಸುತ್ತಿದೆ. ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರದಲ್ಲಿ ನಡೆದ ಘಟನೆ ನಂತರ ನಾವು ಹೊಸ ನಿಯಮಗಳನ್ನು ತಂದಿದ್ದೇವೆ, ಸರ್ಕಾರದಿಂದ ಅನುಮತಿ ಪಡೆದವರು ಮಾತ್ರ ಸ್ಪೋಟಕ ವಸ್ತುಗಳನ್ನು ಬಳಸಬೇಕು. ಅದನ್ನು ಹೊರತುಪಡಿಸಿ ಬೇರೆ ಯಾರು ಕೂಡ ಬಳಸದಂತೆ ಕಾನೂನು ಜಾರಿಗೆ ತರಲಾಗುತ್ತದೆ. ಯಾರಾದರೂ ಕಾನೂನುಬಾಹಿರವಾಗಿ ಸ್ಪೋಟಕಗಳನ್ನು ಇಟ್ಟುಕೊಂಡಿದ್ದರೆ ಕೂಡಲೇ ಹಿಂತಿರುಗಿಸಬೇಕೆಂದು ಸಚಿವರು ಮನವಿ ಮಾಡಿದರು.
ರಾಜ್ಯದಲ್ಲಿ ಹೊಸದಾಗಿ ಸ್ಕೂಲ್ ಆಫ್ ಮೈನಿಂಗ್ ತೆರೆಯುವ ಉದ್ದೇಶವಿದೆ. ಗಣಿಗಾರಿಕೆ ನಡೆಸುವವರಿಗೆ ಇದರಿಂದ ಅನುಕೂಲವಾಗುತ್ತದೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಆರಂಭಿಸುವ ಉದ್ದೇಶ ಇದೆ ಹೀಗಾಗಿ ಎಲ್ಲ ಕಡೆ ಅಕಾರಿಗಳಿಗೆ ತರಬೇತಿ ಹಮ್ಮಿಕೊಳ್ಳಲಾಗುವುದು. ಗಣಿಗಾರಿಕೆ ನಡೆಸುವವರಿಗೆ ಇಲಾಖೆ ವತಿಯಿಂದ ತರಬೇತಿ ನೀಡಲಾಗುವುದು. ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗದಲ್ಲಿ 12 ಸಾವಿರ ಕೋಟಿ ಹಣವನ್ನು ರಾಜಸ್ವ ಧನದ ಮೂಲಕ ಸಂಗ್ರಹಿಸಲಾಗಿದೆ. ಇದರ ಬಡ್ಡಿ ಸೇರಿಸಿ ಒಟ್ಟು 18 ಸಾವಿರ ಕೋಟಿ ರೂಪಾಯಿಯಾಗಿದೆ. ಇದು ಮೂರು ತಿಂಗಳ ಒಳಗೆ ನಮ್ಮ ಕೈ ಸೇರಿದರೆ ಅಭಿವೃದ್ಧಿ ಕಾರ್ಯಗಳಿಗೆ ಕ್ರಿಯಾ ಯೋಜನೆ ರೂಪಿಸಲಿದ್ದೇವೆ ಈ ಮೂಲಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ತರುವುದು ನಮ್ಮ ಉದ್ದೇಶವಾಗಿದೆ. ಜನರಿಗೆ ಸರಳವಾಗಿ ಮತ್ತು ಕಡಿಮೆ ದರದಲ್ಲಿ ಮರಳು ಸಿಗಬೇಕೆಂಬುದು ನಮ್ಮ ಆಶಯವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ನಿತಿನ್ ಪಾಟೀಲ್, ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ್, ಗಣಿ ಮತ್ತು ಭೂ ವಿಜ್ಞಾನ, ಅರಣ್ಯ, ಪರಿಸರ ಇಲಾಖೆ ಅಧಿಕಾರಿಗಳು ಹಾಜರಿದ್ದರು.