– SSLC, ಪಿಯುಸಿ ಮಕ್ಕಳಿಗೆ ಸನ್ಮಾನ
ಚಿಕ್ಕಮಗಳೂರು: ಗೌರಿ-ಗಣೇಶ ಹಬ್ಬಕ್ಕೆ ಗಣಪತಿ ಕೂರಿಸಲು ಗ್ರಾಮಸ್ಥರು ಕೂಡಿಟ್ಟ ಹಣದಲ್ಲಿ ಮಕ್ಕಳಿಗೆ ನೋಟ್ ಬುಕ್ ಕೊಡಿಸಿ, ಪಿಯುಸಿ ಹಾಗೂ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಸನ್ಮಾನ ಮಾಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಳಿಕೆ ಗ್ರಾಮದಲ್ಲಿ ನಡೆದಿದೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರು ಹಾಗೂ ಸಾವಿನ ಸಂಖ್ಯೆ ಎರಡೂ ಏರುತ್ತಲೇ ಇದೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಕೂಡ ಗಣಪತಿ ಕೂರಿಸಲು ಹಲವು ಷರತ್ತುಗಳನ್ನ ಹೇರಿತ್ತು. 20ಕ್ಕಿಂತ ಹೆಚ್ಚು ಜನ ಸೇರಬಾರದು ಎಂದು ಆದೇಶ ತಂದಿತ್ತು. ಆದ್ದರಿಂದ ಹಳ್ಳಿಗಳಲ್ಲಿ 20ಕ್ಕಿಂತ ಹೆಚ್ಚು ಜನ ಸೇರದಂತಿರೋದು ಕಷ್ಟ. ಊರಿಗೆ ಒಂದೇ ಗಣಪತಿ ಇಡೋದು. ಸೀಮಿತ ಜನ ಇರೋದು ಕಷ್ಟಸಾಧ್ಯ ಎಂದು ಹಳಿಕೆ ಗ್ರಾಮಸ್ಥರು ಗಣಪತಿಯನ್ನೇ ಕೂರಿಸಿಲ್ಲ.
ಗ್ರಾಮೀಣ ಭಾಗದಲ್ಲಿ ಗಣೇಶನ ಹೆಸರಲ್ಲಿ ಸಂಘಗಳನ್ನ ಮಾಡಿಕೊಂಡಿರುತ್ತಾರೆ. ಮನೆಗೆ ಇಷ್ಟು ಹಣ, ವರ್ಷಕ್ಕೆ ಇಷ್ಟು ಹಣ ಎಂದು ಗ್ರಾಮಸ್ಥರು ಹಾಕಬೇಕು. ಅದೇ ಹಣದಲ್ಲಿ ವರ್ಷಕ್ಕೊಮ್ಮೆ ಎಂಟತ್ತು ದಿನ ಗಣಪತಿ ಕೂರಿಸಿ ಗ್ರಾಮಸ್ಥರೆಲ್ಲ ಸೇರಿ ಸಂಭ್ರಮಿಸುತ್ತಾರೆ. ಆದರೆ ಈ ವರ್ಷ ಕೊರೊನಾ ಆತಂಕ ಹಾಗೂ ಸರ್ಕಾರದ ಷರತ್ತುಗಳಿಂದ ಹಳಿಕೆ ಗ್ರಾಮದಲ್ಲಿ ಗಣಪತಿಯನ್ನೇ ಕೂರಿಸಿಲ್ಲ. ಗಣಪತಿ ಕೂರಿಸಲು ಮೀಸಲಿದ್ದ ಹಣದಲ್ಲಿ ಗ್ರಾಮದಲ್ಲಿರುವ ಒಂದರಿಂದ ಹತ್ತನೇ ತರಗತಿಯ ಎಲ್ಲ ಮಕ್ಕಳಿಗೆ ಉಚಿತ ನೋಟ್‍ಬುಕ್ ವಿತರಿಸಿದ್ದಾರೆ.
ಜೊತೆಗೆ ತಮ್ಮ ಗ್ರಾಮದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಪಾಸಾಗಿರೋ ಮಕ್ಕಳಿಗೆ ಸನ್ಮಾನ ಮಾಡಿದ್ದಾರೆ. ಊರಿನವರ ಕಾರ್ಯಕ್ಕೆ ಮಕ್ಕಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾವು ಚೆನ್ನಾಗಿ ಓದಿ ಒಳ್ಳೆಯ ಫಲಿತಾಂಶ ತಂದು ಗ್ರಾಮಕ್ಕೆ ಒಳ್ಳೆ ಹೆಸರು ತರುತ್ತೇವೆಂದು ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.