ಶ್ರೀನಗರ: ಕಾಶ್ಮೀರ ಗಡಿಯನ್ನು ಅಜಾಗರೂಕತೆಯಿಂದ ದಾಟಿ ಭಾರತಕ್ಕೆ ಬಂದಿದ್ದ ಪಾಕಿಸ್ತಾನದ ಬಾಲಕನನ್ನು ಭಾರತೀಯ ಸೇನೆ ಶುಕ್ರವಾರ ವಾಪಸ್ ಕಳುಹಿಸುವ ಮೂಲಕ ಭಾರತೀಯ ಸೇನೆ ಮಾನವೀಯತೆಯನ್ನು ಮೆರೆದಿದ್ದಾರೆ.
ಪಾಕಿಸ್ತಾನದ ಮಿರ್ಪುರ್ ಜಿಲ್ಲೆಯ ಅಲಿ ಹೈದರ್ (14) ಅಜಾಗರೂಕತೆಯಿಂದ ಪೂಂಚ್ ಜಿಲ್ಲೆಯ ಗಡಿ ದಾಟಿ ಜಮ್ಮು ಮತ್ತು ಕಾಶ್ಮೀರದ ಮೂಲಕ ಭಾರತಕ್ಕೆ ಬಂದಿದ್ದಾನೆ. ಬಾಲಕ ಮುಗ್ಧ ಹಾಗೂ ನಿರಾಪರಾಧಿಯಾಗಿದ್ದು, ಆತನಿಗೆ ಆಹಾರ, ಬಟ್ಟೆ ಮತ್ತು ಆಶ್ರಯವನ್ನು ನೀಡಲಾಯಿತು ಎಂದು ಭಾರತೀಯ ಸೇನೆ ತಿಳಿಸಿದೆ.
ಮಾನವೀಯತೆಯ ದೃಷ್ಟಿಯಿಂದ ಅಲಿ ಹೈದರ್‍ನನ್ನು ವಾಪಸ್ ಕಳುಹಿಸುವಂತೆ ಜನವರಿ 3ರಂದು ಪಾಕಿಸ್ತಾನ ಅಧಿಕಾರಿಗಳು ಮನವಿ ಮಾಡಿರುವುದಾಗಿ ತಿಳಿಸಿದರು.
ಇದೇ ರೀತಿ 2020ರ ಡಿಸೆಂಬರ್ 24ರಂದು ಪೂಂಚ್ ಸೆಕ್ಟರ್ ಮೂಲಕ ಅಜಾಗರೂಕತೆಯಿಂದ ಭಾರತೀಯ ಹುಡುಗ ಮೊಹಮ್ಮದ್ ಬಶೀರ್ ಪಾಕಿಸ್ತಾನಕ್ಕೆ ಹೋಗಿದ್ದನು. ಆತನನ್ನು ವಾಪಸ್ ಕಳುಹಿಸುವಂತೆ ಭಾರತವು ಮನವಿ ಮಾಡಿತ್ತು. ಪಾಕಿಸ್ತಾನ ಅಧಿಕಾರಿಗಳು 16 ದಿನಗಳ ಕಾಲ ಬಂಧನದಲ್ಲಿದ್ದ ಮೊಹಮ್ಮದ್ ಬಶೀರ್‍ನನ್ನು ಹಸ್ತಾಂತರಿಸಿದ್ದರು ಎಂದು ತಿಳಿಸಿದರು.
ಪಾಕಿಸ್ತಾನ ಅಧಿಕಾರಿಗಳು ಪ್ರಸ್ತಾಪವನ್ನು 2021ರ ಜನವರಿ 6ರಂದು ಒಪ್ಪಿಕೊಂಡು ಇದೀಗ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ನಾಗರಿಕ ಆಡಳಿತ ಬೆಂಬಲದೊಂದಿಗೆ, ಅಲಿ ಹೈದರ್‍ನನ್ನು ಪೂಂಚ್ ರಾವಲಕೋಟ್ ಕ್ರಾಸಿಂಗ್ ಪಾಯಿಂಟ್ ಮೂಲಕ ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಲಾಗಿದೆ. ಪಾಕಿಸ್ತಾನ ಅಧಿಕಾರಿಗಳು 16 ದಿನಗಳ ಕಾಲ ಬಂಧನದಲ್ಲಿದ್ದ ಮೊಹಮ್ಮದ್ ಬಶೀರ್ ಅವರನ್ನು ಹಸ್ತಾಂತರಿಸಿದ್ದರು ಎಂದು ತಿಳಿಸಿದರು.