ಕಾರವಾರ: ಸುಳ್ಳು ಮಾಹಿತಿ ನೀಡಿ ಮಹಾರಾಷ್ಟ್ರದಿಂದ ಕಾರವಾರಕ್ಕೆ ಬಂದಿದ್ದ ಮತ್ತೋರ್ವನಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಮಹಾರಾಷ್ಟ್ರದಿಂದ ಗೋವಾಕ್ಕೆ ಬೋಟ್ ನಲ್ಲಿ ತನ್ನ ಸ್ನೇಹಿತನೋರ್ವನ ಜೊತೆ ಬಂದಿದ್ದ 37 ವರ್ಷದ ಸೋಂಕಿತ ವ್ಯಕ್ತಿ, ಗೋವಾದಿಂದ ಹನ್ನೆರಡು ಜನರ ಜೊತೆ ನಡೆದುಕೊಂಡು ಕಾರವಾರದ ಮಾಜಾಳಿ ಗಡಿಗೆ ಮೇ 14ರಂದು ಬಂದಿದ್ದ.
Advertisement
Advertisement
ಮಹಾರಾಷ್ಟ್ರದಿಂದ ಬಂದಿದ್ದೇನೆ ಎಂದು ಹೇಳಿದರೆ ಕ್ವಾರಂಟೈನ್ ಆಗಬೇಕು ಎನ್ನುವ ಕಾರಣಕ್ಕೆ ಗೋವಾದಿಂದ ಬಂದಿರುವುದಾಗಿ ಅಧಿಕಾರಿಗಳಿಗೆ ಸುಳ್ಳು ಹೇಳಿ ಹೋಮ್ ಕ್ವಾರಂಟೈನ್‍ಗೆ ಒಳಗಾಗಿದ್ದ.
Advertisement
ಈ ಯುವಕನ ಬಗ್ಗೆ ತಿಳಿದಿದ್ದ ಗ್ರಾಮಸ್ಥರು ಈತ ಮಹಾರಾಷ್ಟ್ರದಿಂದ ಬಂದಿದ್ದಾನೆ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳ ವಿಚಾರಣೆ ವೇಳೆ ಸತ್ಯ ಬಾಯಿಬಿಟ್ಟು ಪರೀಕ್ಷೆಗೆ ಒಳಗಾಗಿದ್ದ. ಕೂಡಲೇ ಈತನನ್ನು ಕಾರವಾರದ ಸರ್ಕಾರಿ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದ್ದು ಗಂಟಲು ದ್ರವ ಪರೀಕ್ಷೆಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ.
Advertisement
ಈತನ ಜೊತೆ ಮಹಾರಾಷ್ಟ್ರದಿಂದ ಬಂದಿದ್ದ ಮತ್ತೋರ್ವ ಸ್ನೇಹಿತ ಹಾಗೂ ಗೋವಾದಿಂದ ಜೊತೆಯಲ್ಲಿ ನಡೆದುಕೊಂಡು ಬಂದವರ ಗಂಟಲು ದ್ರವವನ್ನೂ ಪರೀಕ್ಷೆಗೆ ಕಳುಹಿಸಲಾಗಿದೆ. ಈಗಾಗಲೇ ಸೋಂಕಿತನ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದ್ದು ಈತನ ಟ್ರಾವೆಲ್ ಹಿಸ್ಟರಿ ಕಲೆಹಾಕಲಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಒಟ್ಟು 9 ಮಂದಿಗೆ ಸೋಂಕು ಬಂದಿದ್ದು, ಸೋಂಕಿತರ ಸಂಖ್ಯೆ 51ಕ್ಕೆ ಏರಿಕೆಯಾಗಿದೆ. ಈ ಪೈಕಿ ಒಟ್ಟು 11 ಮಂದಿ ಬಿಡುಗಡೆಯಾಗಿದ್ದು, 40 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.